ADVERTISEMENT

ಬಡವರಿಗೆ ಉತ್ತಮ ಆರೋಗ್ಯ ಸೇವೆ

ಮಣಿಪಾಲ ಆರೋಗ್ಯ ಕಾರ್ಡ್‌ ಬಿಡುಗಡೆ: ಉದ್ಯಮಿ ಸದಾನಂದ ಚಾತ್ರಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 12:17 IST
Last Updated 5 ಏಪ್ರಿಲ್ 2018, 12:17 IST

ಉಡುಪಿ: ‘ಸರ್ಕಾರದ ಆನೇಕ ಆರೋಗ್ಯ ಸೇವೆಗಳು ಸಮಾಜದ ಕಡುಬಡವರಿಗೆ ತಲುಪುತ್ತಿಲ್ಲ’ ಎಂದು ಉದ್ಯಮಿ ಸದಾನಂದ ಚಾತ್ರಾ ತಿಳಿಸಿದರು.ಮಣಿಪಾಲ್ ವಿಶ್ವವಿದ್ಯಾಲಯದ, ಸಮೂಹ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಮಣಿಪಾಲ್ ಆರೋಗ್ಯ ಕಾರ್ಡ್ ಹಾಗೂ ದಂತ ಚಿಕಿತ್ಸೆ ಆರೋಗ್ಯ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದರು.

ಮಣಿಪಾಲ ಸಮೂಹ ಎಲ್ಲ ಆಸ್ಪತ್ರೆಗಳು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಉತ್ತಮ ಕೆಲಸ. ಆರೋಗ್ಯ ಸೇವೆಯಲ್ಲಿ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಎಷ್ಟು ಆರೋಗ್ಯಪೂರ್ಣರಾಗಿ ಬದುಕಿದ್ದೇವೆ ಎನ್ನುವುದು ಮುಖ್ಯ. ಉತ್ತಮ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಿಸಲಾದ ‘ಮಣಿಪಾಲ ಆರೋಗ್ಯ ಕಾರ್ಡ್’ನ ಹಲವು ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯಬೇಕು. ಇತರ ನಗರದ ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದಾಗ ಬೇರೆ ಭಾಗಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಒಳ್ಳೆಯ ಆರೋಗ್ಯ ಸೇವೆ ಇದೆ ಎಂದು ಹೇಳಿದರು.

ಕುಟುಂಬದ ವ್ಯಕ್ತಿಯೊಬ್ಬ ಅನಾರೋಗ್ಯಕ್ಕೀಡಾದರೆ ಆಸ್ಪತ್ರೆ ವೆಚ್ಚದ ಹೊರೆ ಒಂದು ಕಡೆಯಾದರೆ ದುಡಿಮೆ ಇಲ್ಲದ ಕಾರಣ ಆರ್ಥಿಕ ಹೊರೆಯೂ ಇನ್ನಷ್ಟು ಹೆಚ್ಚಾಗುತ್ತದೆ. ಮಣಿಪಾಲ ಆರೋಗ್ಯ ಕಾರ್ಡ್ ಇದ್ದರೆ ಆರೋಗ್ಯ ತಪಾಸಣೆ, ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಹಾಗೂ ಔಷಧಕ್ಕೂ ರಿಯಾಯಿತಿ ಪಡೆದುಕೊಳ್ಳಬಹುದು. ಇದರಿಂದ ಒಂದಿಷ್ಟು ಹೊರೆ ಕಡಿಮೆಯಾಗುತ್ತದೆ. ಆದ್ದರಿಂದ ಮಧ್ಯಮ ಹಾಗೂ ಬಡ ಕುಟುಂಬಗಳು ಇದನ್ನು ಪಡೆದುಕೊಳ್ಳುವುದು ಸೂಕ್ತ. ಸಾಮಾಜಿಕ ಕಾಳಜಿಯಿಂದಲೇ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ ಅಭಿಪ್ರಾಯಪಟ್ಟರು.

ADVERTISEMENT

ಮಾಹೆ ಕುಲಪತಿ ಡಾ.ಎಚ್ ವಿನೋದ್ ಭಟ್, ಸಹ ಉಪಕುಲಪತಿ ಪೂರ್ಣಿಮಾ ಬಾಳಿಗ, ಮಣಿಪಾಲ ಮೆಡಿಕಲ್ ಕಾಲೇಜು ಡೀನ್ ಪ್ರಜ್ಞಾ ರಾವ್,, ಡಾ. ಉನ್ನಿಕೃಷ್ಣನ್ ಉಪಸ್ಥಿತರಿದ್ದರು. ಅವಿನಾಶ ಶೆಟ್ಟಿ ಸ್ವಾಗತಿಸಿದರು.

‘4 ಲಕ್ಷ ಸದಸ್ಯತ್ವದ ಗುರಿ’

ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವ ಹೊರ ರೋಗಿಗಳಿಗೆ ಪ್ರಯೋಗಾಲಯದ ಶುಲ್ಕದಲ್ಲಿ ಶೇ 30 ರಿಯಾಯಿತಿ ಇದ್ದು , ರೋಗಿಗಳಿಗೆ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ. ಒಳರೋಗಿಗಳ ಬಿಲ್ಲಿಂಗ್‌ನಲ್ಲಿ ನೇರ ಶೇ 25, ಫಾರ್ಮಸಿಯಿಂದ ಎಷ್ಟೇ ಬಾರಿ ಔಷಧ ಖರೀದಿಸಿದರೂ ಶೇ 10ರ ವರೆಗೆ ರಿಯಾಯಿತಿ. ಕರಾವಳಿ ಕರ್ನಾಟಕದ ಮಣಿಪಾಲ ಸಮೂಹದ ಎಲ್ಲ ಆಸ್ಪತ್ರೆಗಳಿಗೆ ಅನ್ವಯ. ಕಳೆದ ಬಾರಿ ಮಂಗಳೂರು ಮಣಿಪಾಲದಲ್ಲಿ 1.5ಲಕ್ಷ ಕಾರ್ಡ್ ನೋಂದಣಿ ಆಗಿತ್ತು. ಈ ಬಾರಿ 4ಲಕ್ಷ ಸದಸ್ಯತ್ವದ ಗುರಿಯನ್ನು ಹೊಂದಲಾಗಿದೆ ಎಂದು ಡಾ.ಎಚ್.ಎಸ್.ಬಲ್ಲಾಳ್ ತಿಳಿಸಿದರು.

**

ಉತ್ತಮ ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿರುವ ಬಡವರಿಗೆ ಕಡಿಮೆ ಹಣದಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತಾಗಲಿ – ಸದಾನಂದ ಚಾತ್ರಾ,
ಉದ್ಯಮಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.