ADVERTISEMENT

ಬಡವರಿಗೆ ಜಿಲ್ಲಾ ಆಸ್ಪತ್ರೆ ಇನ್ನಷ್ಟು ಹತ್ತಿರ

ಇನ್ನು ಮುಂದೆ ರೋಗಿಗಳಿಗೆ ಸುಲಭವಾಗಿ ಸಿಗಲಿದೆ ಸ್ಕ್ಯಾನಿಂಗ್‌ ಸೌಲಭ್ಯ

ತೃಪ್ತಿ .ಎಲ್‌ ಪೂಜಾರಿ
Published 4 ಜೂನ್ 2018, 9:30 IST
Last Updated 4 ಜೂನ್ 2018, 9:30 IST
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್‌ ಕೇಂದ್ರ. ಪ್ರಜಾವಾಣಿ ಚಿತ್ರ
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಸಿಟಿ ಸ್ಕ್ಯಾನಿಂಗ್‌ ಕೇಂದ್ರ. ಪ್ರಜಾವಾಣಿ ಚಿತ್ರ   

ಉಡುಪಿ: ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ಸಿಟಿ ಸ್ಕ್ಯಾನಿಂಗ್‌ ಮಾಡಿಸಲು ಖಾಸಗಿ ಆಸ್ಪತ್ರೆಗಳಿಗೆ ತೆರಳ
ಬೇಕಾಗಿಲ್ಲ, ಇನ್ನೂ ಮುಂದೆ ಈ ಸೇವೆ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲೂ ಸಿಗಲಿದೆ.

ಸರ್ಕಾರಿ ಆಸ್ಪತ್ರೆಗಳಿಗೆ ಅಧಿಕಾರಿಗಳು, ಸ್ಥಿತಿವಂತರು ಯಾರೂ ಬರುವುದಿಲ್ಲ. ಇಲ್ಲಿಗೆ ಹೆಚ್ಚಾಗಿ ಬಡವರೇ ಬರುತ್ತಾರೆ.ಆದರಲ್ಲೂ ಆರ್ಥಿಕ ಸಮಸ್ಯೆ ಇರುವವರು ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡುತ್ತಾರೆ. ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಒಳ ರೋಗಿಗಳಾಗಿ ಭರ್ತಿಯಾಗುವವರಲ್ಲಿ 5–6 ಜನರಿಗೆ ಸ್ಕ್ಯಾನಿಂಗ್‌ ಅವಶ್ಯವಿದೆ. ಈ ಸೇವೆಯ ಕೊರತೆಯಿಂದಾಗಿ ರೋಗಿಗಳನ್ನು ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿತ್ತು.

ಇನ್ನೂ ಬಡವರು ಖಾಸಗಿ ಲ್ಯಾಬ್‌ಗಳಲ್ಲಿ ಅಥವಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ ಮಾಡಬೇಕೆಂದರೆ ಕನಿಷ್ಠ ₹ 2,000 ರಿಂದ ₹ 5,000 ಶುಲ್ಕ ಬರಿಸಬೇಕು. ಇದು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನುಂಗಲಾರ ತುತ್ತು. ಇದರಿಂದಾಗಿ ಆನೇಕರು ಸರ್ಕಾರಿ ಆಸ್ಪತ್ರೆಗೆ ಹಿಡಿಶಾಪ ಹಾಕುತ್ತಾ, ಅನಿರ್ವಾಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಲುತ್ತಿದ್ದರು. ಇನ್ನು ಕೆಲವರು ಈ ಜಂಜಾಟವೆ ಬೇಡ ಎಂದು ಆಸ್ಪತ್ರೆಯಿಂದ ದೂರ ಉಳಿಯುತ್ತಿದ್ದರು.

ADVERTISEMENT

ಈಗ ಸರ್ಕಾರ ಮೆಡಿಕಲ್‌ ಕಾಲೇಜು ಇಲ್ಲದ ಎಲ್ಲಾ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ ಸೇವೆ ಆಳವಡಿಸುವ ಆದೇಶ ನೀಡಿದೆ. ಈ ಲ್ಯಾಬ್‌ನಲ್ಲಿ ಲಭ್ಯವಿರುವ ಸೇವೆಗೆ ಸರ್ಕಾರವೇ ಕನಿಷ್ಠ ದರ ನಿಗದಿ ಮಾಡಲಿದೆ. ಸರ್ಕಾರಿ ಆಸ್ಪತ್ರೆಗಳು ಎಂದರೇ ಸೌಲಭ್ಯ ವಂಚಿತ ಎಂಬ ಕೀಳರಿಮೆ ಹೋಗಲಾಡಿಸಲು ಈ ಸೌಲಭ್ಯ ಸಹಾಯ ಮಾಡಲಿದೆ.

ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡದಲ್ಲೇ ಸಿಟಿ ಸ್ಕ್ಯಾನಿಂಗ್‌ ಸೆಂಟರ್‌ ಆರಂಭವಾಗಲಿದೆ. ಅದರ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಬೆಂಗಳೂರು ಮೂಲದ ಕೃಷ್ಣ ಏಜೆನ್ಸಿ ವಹಿಸಿಕೊಂಡಿದೆ. ಅತ್ಯಾಧುನೀಕ ವೈದ್ಯಕೀಯ ಉಪಕರಣಗಳು ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದೆ. ಜನ ಸಾಮಾನ್ಯರು ಶೀಘ್ರದಲ್ಲಿ ಈ ಸೇವೆ ಪಡೆಯಬಹುದಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‌ ಕೇಂದ್ರ ಆರಂಭಿಸುವ ಮೂಲಕ ಆರ್ಥಿಕ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಾಗುವವರಿಗೆ ಸಹಾಯಕವಾಗಲಿದೆ. ಮುಂದಿನ ದಿನದಲ್ಲಿ ಒಳರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯಗಳಿವೆ ಎನ್ನುವ ಮಾತು ಕೇಳಿ ಬರುತ್ತಿದೆ.

1997ರಲ್ಲಿ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಸುಮಾರು 10 ಎಕರೆ ವಿಸ್ತಿರ್ಣದಲ್ಲಿರುವ ಆಸ್ಪತ್ರೆಯಲ್ಲಿ 124 ಹಾಸಿಗೆ, 70 ಹೆರಿಗೆ ಹಾಸಿಗೆ, 29 ವೈದ್ಯಧಿಕಾರಿಗಳು, 16 ನರ್ಸ್‌ ಹಾಗೂ 17 ಸ್ಪಾಫ್‌ ಸರ್ಸ್‌ ಸೇರಿದಂತೆ ಶವಗಾರ ಸಹಿತ 9 ಮೃತ ದೇಹ ಇಡುವ ಶೀತಲೀಕರಣ ಫಟಕ ಹಾಗೂ ಸರ್ಕಾರದ ಜೆನರಿಕ್‌ ಔಷಧ ಜನಸಂಜೀವಿನಿ ಮಳಿಗೆ, ರಕ್ತ ನಿಧಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆಯ ಆವರಣದಲ್ಲಿ ಹಸಿರು ಹುಲ್ಲು ಬೆಳಸಿ ರೋಗಿಗಳ ಸಂಬಂಧಿಕರು ಬಂದಾಗ ಕೂರಲು ಆಸನಗಳನ್ನು ಆಳವಡಿಸಲಾಗಿದೆ.

ಜನ ಸ್ನೇಹಿ ಸೇವೆ ಆರಂಭವಾಗಲಿ

ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನಿಂಗ್‌ ಸೇವೆ ಆರಂಭವಾಗುತ್ತಿರುವುದು ಸಂತೋಷದ ವಿಷಯ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅಶಕ್ತರಾದವರು ಮಾತ್ರ ಈ ಸರ್ಕಾರಿ ಆಸ್ಪತ್ರೆಯ ಕಡೆ ಮುಖ ಮಾಡುತ್ತಾರೆ. ಈ ನಿಟ್ಟಿನಲ್ಲಿ ಇನಷ್ಟು ಜನ ಸೇಹ್ನಿ ಸೇವೆಗಳು ಆರಂಭವಾಗಲಿ. ಇದರಿಂದ ಸಾಕಷ್ಟು ಬಡ ರೋಗಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಹೊರ ರೋಗಿ ಅಂಜಲಿನ್‌ ಡಿಸಿಲ್ವ ತಿಳಿಸಿದರು

**
ಮೆಡಿಕಲ್‌ ಕಾಲೇಜು ಇಲ್ಲದ ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸ್ಕ್ಯಾನಿಂಗ್‌ ಸೆಂಟರ್‌ ಸ್ಥಾಪಿಸುವಂತೆ ಸರ್ಕಾರ ಆದೇಶವಿದೆ
ಡಾ.ಎಚ್‌. ಮಧುಸೂದನ್‌ ನಾಯಕ್‌, ಜಿಲ್ಲಾ ಸಜರ್ನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.