ADVERTISEMENT

ಬಬ್ಬುಸ್ವಾಮಿ, ಕೊರಗಜ್ಜ ವಿಶೇಷ ದರ್ಶನ ಸೇವೆ

ಪೇಟೆಬೆಟ್ಟು ಕೊರಗಜ್ಜನ ಕ್ಷೇತ್ರಕ್ಕೆ ಸರ್ವಧರ್ಮೀಯ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 9:22 IST
Last Updated 4 ಜೂನ್ 2018, 9:22 IST
ಕಟಪಾಡಿ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನ.
ಕಟಪಾಡಿ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನ.   

ಶಿರ್ವ: ಉಡುಪಿ ತಾಲ್ಲೂಕಿನ ಕಟಪಾಡಿ ಪೇಟೆಬೆಟ್ಟು ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಈಚೆಗೆ ಮುಸ್ಲಿಂ ಕುಟುಂಬ ಬಬ್ಬುಸ್ವಾಮಿ ಕೊರಗಜ್ಜ ದೈವಕ್ಕೆ ದರ್ಶನ ಸೇವೆ ಮಾಡಿಸಿದ್ದು, ವ್ಯಾಪಕ ಸುದ್ದಿ ಆಗಿತ್ತು. ಈಗ ಈ ದೈವಸ್ಥಾನದ ಕಾರಣಿಕ ಕಂಡು ರಾಜ್ಯದ ನಾನಾ ಕಡೆಗಳಿಂದ ಎಲ್ಲ ಧರ್ಮದ ಭಕ್ತರು ದರ್ಶನಕ್ಕೆ ಬರಲಾರಂಭಿಸಿದ್ದಾರೆ. ಇದೇ 15ರಂದು ಮಿಥುನ ಸಂಕ್ರಮಣದಂದು ಮತ್ತೊಮ್ಮೆ ವಿಶೇಷ ದೈವದರ್ಶನ ಸೇವೆ ಸಂಪನ್ನವಾಗಲಿದೆ.

ಕಟಪಾಡಿ ಮೂಲದ ಮುಸ್ಲಿಂ ಯುವಕ ಕೆಲವರೊಂದಿಗೆ ಸೇರಿ ಕೊರಗಜ್ಜ ದೈವಕ್ಕೆ ಅಪಚಾರ ಎಸಗಿಗಿದ್ದ. ಪರಿಣಾಮ ಕುಟುಂಬಕ್ಕೆ  ಆರೋಗ್ಯ ಸಮಸ್ಯೆ ಕಾಣಿಸಿತ್ತು. ಹಲವರ ಎದುರು ದೈವದರ್ಶನ ನಡೆಸಲಾಗಿತ್ತು. ಈ ಪವಾಡವು ತಿಳಿಯುತ್ತಿದ್ದಂತೆ ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದ ಪರಿಸರದಲ್ಲಿ ಭಕ್ತರ ದಂಡು ಕಾಣುವಂತಾಯಿತು. ಪ್ರತೀ ತಿಂಗಳ ಸಂಕ್ರಮಣದ ಹೊರತು ಬೇರೆ ದಿವಸದಲ್ಲಿ ಈ ದೈವಸ್ಥಾನದ ಬಾಗಿಲು ತೆರೆಯದೆ ಇರುವುದರಿಂದ ಭಕ್ತರು ನಮಸ್ಕರಿಸಿ ಹೋಗುತ್ತಾರೆ. ದೈವದ ಅಭಯಕ್ಕಾಗಿ ಬರುವ ಸಂಕ್ರಮಣದವರೆಗೆ ಭಕ್ತರು ಕಾಯಬೇಕು.

ಪೇಟೆಬೆಟ್ಟು ಬಬ್ಬುಸ್ವಾಮಿ ಕ್ಷೇತ್ರದಲ್ಲಿ ಈ ಕಾರಣಿಕ ನಡೆದ ಬಳಿಕ ಭಕ್ತರು ಬಬ್ಬುಸ್ವಾಮಿ ಮತ್ತು ಕೊರಗಜ್ಜ ದೈವದ ಕ್ಷೇತ್ರಕ್ಕೆ ಬರುತ್ತಿರುವುದು ಈ ಕ್ಷೇತ್ರದ ವಿಶೇಷತೆ ಹೆಚ್ಚಿಸಿದೆ. ಬೆಂಗಳೂರು, ಶಿವಮೊಗ್ಗ, ಎನ್ ಆರ್. ಪುರ , ಬಾಗಲಕೋಟೆ, ಮಂಗಳೂರು, ಕುಂದಾಪುರ ಸೇರಿದಂತೆ ವಿವಿಧ ಕಡೆಗಳ ಭಕ್ತರು ಸಮಸ್ಯೆಗಳ ಪರಿಹಾರಕ್ಕಾಗಿ ಜೂ.15 ರಂದು ಮತ್ತೊಮ್ಮೆ ವಿಶೇಷ ದರ್ಶನ ಸೇವೆ ನಡೆಸಲು ದೈವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.

ADVERTISEMENT

ಈ ದೈವದರ್ಶನ ಸೇವೆ ಮುಸ್ಲಿಂರಿಗೆ ಮಾತ್ರವಲ್ಲದೇ ಎಲ್ಲ ಸಮೂಹದ ಭಕ್ತರಿಗೂ ಇದೆ. ಭಕ್ತರು ಕಷ್ಟ ಪರಿಹಾರಕಕ್ಕಾಗಿ ವಿಶೇಷ ದರ್ಶನ ಸೇವೆಯನ್ನು ಸಂಕ್ರಮಣದಂದು ಬೆಳಿಗ್ಗೆ 10 ಗಂಟೆಯಿಂದ ದೈವಸ್ಥಾನದಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ 50 ಮಂದಿ ದರ್ಶನ ಸೇವೆಯಲ್ಲಿ ಪ್ರಶ್ನೆ ಕೇಳಲು ಹೆಸರು ದಾಖಲು ಮಾಡಿದ್ದಾರೆ. ಸಾವಿರಾರು ಸಂಖ್ಯೆ ಭಕ್ತರು ಸೇರುವ ನಿರೀಕ್ಷೆ ಇದೆ. ದೈವಸ್ಥಾನದಲ್ಲಿ ಭಕ್ತರಿಗೆ ಸೇರಲು ಮತ್ತು ವಾಹನ ನಿಲ್ಲಿಸಲು ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.

ದೈಸ್ಥಾನದ ಕಾಣಿಕೆ ಬಡ್ಡಿ ಕಳವು ಮಾಡಿದ್ದ ಯುವಕ ಕೊರಗಜ್ಜನ ಅಭಯವಾಕ್ಯದಿಂದ ಗುಣಮುಖವಾಗಿ ನಿತ್ಯವೂ ಬಬ್ಬುಸ್ವಾಮಿ, ಕೊರಗಜ್ಜ ದೈವಸ್ಥಾನಕ್ಕೆ ಬಂದು ದೇವರ ಗಂಧ ಪ್ರಸಾದ ಪಡೆದುಕೊಳ್ಳುತ್ತಿರುವ ವೈರಲ್‌ ಆಗಿತ್ತು. ಈಗ ಹೆಚ್ಚಿನ ಸಂಖ್ಯೆಯ ಭಕ್ತರು ಬಂದು ಬಬ್ಬುಸ್ವಾಮಿ ಕೊರಗಜ್ಜನ ದರ್ಶನ ಪಡೆಯುತ್ತಿದ್ದಾರೆ ಎಂದು ದೈವಸ್ಥಾನದ ಆಡಳಿತ ಮಂಡಳಿ ತುಕಾರಾಮ ತಿಳಿಸಿದ್ದಾರೆ.

ಇದೇ ಮೊದಲ ದೈವದರ್ಶನಕ್ಕೆ ಟೋಕನ್!

ಕಟಪಾಡಿ ಪೇಟೆಬೆಟ್ಟು ಬಬ್ಬುಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ವಿಶೇಷ ದೈವದರ್ಶನ ಸೇವೆ ನಡೆಯುವ ದಿನ ಭಕ್ತರನ್ನು ನಿಯಂತ್ರಿಸಿ, ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಟೋಕನ್ ವ್ಯವಸ್ಥೆಯನ್ನು ಮಾಡಲಾಗಿದೆ. ಭಾನುವಾರ ತನಕ ರಾಜ್ಯದ ವಿವಿದೆಢೆಗಳಿಂದ ಒಟ್ಟು 50 ಮಂದಿ ಟೋಕನ್ ಪಡೆದು ದರ್ಶನದಲ್ಲಿ ಪ್ರಶ್ನೆ ಕೇಳಲು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಸಾಕಷ್ಟು ಕಡೆಗಳಿಂದ ದೈವಸ್ಥಾನಕ್ಕೆ ಕರೆಗಳು ಬರುತ್ತಿದ್ದು, ಇನ್ನೂ ಸುಮಾರು ನೂರು ಟೋಕನ್ ವಿತರಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಟೋಕನ್ ವ್ಯವಸ್ಥೆಯನ್ನು ಇತಿಹಾಸದಲ್ಲೇ ಪ್ರಥಮವಾಗಿ ಆರಂಭಿಸಲಾಗಿದೆ. ಇದು ನಾವು ನಂಬಿರುವ ಬಬ್ಬುಸ್ವಾಮಿ ಕೊರಗಜ್ಜ ದೈವದ ಮಹಿಮೆಯಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಪ್ರೇಮ್ ಕುಮಾರ್ ತಿಳಿಸಿದ್ದಾರೆ.

– ಪ್ರಕಾಶ ಸುವರ್ಣ ಕಟಪಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.