ADVERTISEMENT

ಬಿಜೆಪಿ ಲಾಲಾಜಿ ‘ಕೈ‘ ಹಿಡಿದ ಮತದಾರ

ಕಾಪು ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಮಂತ್ರಕ್ಕೆ ಸಿಗದ ಮನ್ನಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2018, 6:43 IST
Last Updated 17 ಮೇ 2018, 6:43 IST

ಶಿರ್ವ: 2014 ಮತ್ತು 2018 ರಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡಿರುವ ಅಭಿವೃದ್ದಿ ವರ್ಕೌಟ್‌ ಆಗಲೆ ಇಲ್ಲ. ಟಿಕೆಟ್ ಆಕಾಂಕ್ಷಿಗಳ ಭರಾಟೆಯ ನಡುವೆ ಕೊನೆ ಕ್ಷಣದಲ್ಲಿ ಟಿಕೆಟ್ ಪಡೆದು ಆಖಾಡಕ್ಕೆ ಇಳಿದ ಅಭ್ಯರ್ಥಿಗಳೆ ಹೊಸ ಟ್ರೆಂಡ್‌ನಿಂದ ಜಯಶಾಲಿ ಆಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಮಾಜಿ ಶಾಸಕ ಲಾಲಾಜಿ ಮೆಂಡನ್ ಅವರಿಗೆ ಮೊದಲೆ ‌‌ಟಿಕೆಟ್ ಪಕ್ಕಾ ಆಗಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ವಿಳಂಬ ಆಗಿದ್ದರಿಂದ ಸಾಮಾಜಿಕ ನ್ಯಾಯದ ಆಧಾರದಲ್ಲಿ ವಿನಯಕುಮಾರ್ ಸೊರಕೆ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದರು.

ಈ ಬಾರಿ ಕಾಂಗ್ರೆಸ್ ಟಿಕೆಟ್‌ ಯಾವುದೇ ಅಡ್ಡಿ ಇಲ್ಲದೆ ಪಡೆದ ಸೊರಕೆ ಅಭ್ಯರ್ಥಿಯಾಗಿದ್ದರು. ಆದರೆ, ಫಲಿತಾಂಶ ಅವರ ವಿರುದ್ಧ ಬಂದಿದೆ. ಲಾಲಾಜಿ ಆರ್. ಮೆಂಡನ್ ಅವರಿಗೆ ಮತದಾರ ಕೈ ಹಿಡಿದ್ದಿದ್ದಾನೆ. ಕಾಪು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 2008ರ ಚುನಾವಣೆಯಲ್ಲಿ ಸಾಕಷ್ಟು ಟಿಕೆಟ್ ಆಕಾಂಕ್ಷಿಗಳ ಪೈಪೊಟಿಯ ನಡುವೆ  ಕಾಂಗ್ರೆಸ್‌ನಿಂದ ವಿನಯಕುಮಾರ್ ಸೊರಕೆ ಗೆಲುವು ದಾಖಲಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ಲಾಲಾಜಿ ಮೆಂಡನ್‌ ವಿಜಯ ಪತಾಕೆ ಹಾರಿಸಿದ್ದಾರೆ.

ADVERTISEMENT

ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಲಾಲಾಜಿ ಆರ್. ಮೆಂಡನ್ ಅವರು ಈ ಬಾರಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಹಿಂದೆ ಯಾರು ಮಾಡದ ಹೊಸ ದಾಖಲೆ ಲಾಲಾಜಿ ಆರ್. ಮೆಂಡನ್ ಮಾಡಿದ್ದಾರೆ.

ಕಾಪು ಕ್ಷೇತ್ರದಲ್ಲಿ ಲಾಲಾಜಿ ಆರ್. ಮೆಂಡನ್ ಶಾಸಕರಾಗಿದ್ದ ವೇಳೆ ಅವರು ಯಡಿಯೂರಪ್ಪ ಸರ್ಕಾರದಲ್ಲಿ ಸಾಕಷ್ಟು ಅನುದಾನ ತಂದು ಕ್ಷೇತ್ರದಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದರು. ಆದರು ಅವರು ಸೋಲು ಕಂಡಿದ್ದರು. 2014ರ ಚುನಾವಣೆಯಲ್ಲಿ ಹೊಸ ಅಭ್ಯರ್ಥಿಯಾಗಿ ಪುತ್ತೂರಿನ ವಿನಯಕುಮಾರ್ ಸೊರಕೆ ಕಾಪು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಥಮ ಬಾರಿಗೆ ಸ್ಪರ್ಧಿಸಿ 13 ದಿನಗಳಲ್ಲಿ ಶಾಸಕ, ಸಚಿವರಾದರು. ಅವರು ಕ್ಷೇತ್ರದಲ್ಲಿ ಏನೇಲ್ಲ ಅಭಿವೃದ್ಧಿ ಮಾಡಿದರೂ ಈ ಬಾರಿ ಗೆಲುವು ಅವರಿಗೆ ಸಿಗಲಿಲ್ಲ. ಈ ಚುನಾವಣೆಯಲ್ಲಿ ಲಾಲಾಜಿ ಮೆಂಡನ್‌ ಪರ ಮತದಾರ ಜೈ ಎಂದಿದ್ದಾನೆ.

ಕಾಪು ತಾಲ್ಲೂಕು, ಕಾಪು ಪುರಸಭೆಯಂತಹ ಹೊಸ ಬದಲಾವಣೆಗಳು ಕ್ಷೇತ್ರದಲ್ಲಾದರೂ ಕೂಡಾ ಮತದಾರರ ತೀರ್ಪು ಮಾತ್ರ ಸೊರಕೆ ಪರವಾಗಿ ಬರಲೆ ಇಲ್ಲ. ಹಿಂದೂತ್ವ ಹಾಗೂ ಮೋದಿ ಅಲೆ ಬಿಜೆಪಿ ಪರವಾಗಿ ಕೆಲಸ ಮಾಡಿದ್ದು ಲಾಲಾಜಿ ಮೆಂಡನ್‌ಗೆ ವರವಾಗಿದೆ ಎಂಬುದು ಬಿಜೆಪಿ ಮುಖಂಡರ ಲೆಕ್ಕಾಚಾರ. ಏನೆ ಇರಲಿ ಅಭಿವೃದ್ಧಿ ಈ ಬಾರಿ ಚುನಾವಣೆಯಲ್ಲಿ ಸೊರಕೆ ಕೈ ಹಿಡಿಯಲೇ ಇಲ್ಲ.

ಲಾಲಾಜಿ ವ್ಯಕ್ತಿತ್ವಕ್ಕೆ ಗೆಲುವು ಸಿಕ್ಕಿದೆ

ಲಾಲಾಜಿ. ಅರ್. ಮೆಂಡನ್ ಅವರ ವ್ಯಕ್ತಿತ್ವವು ಅವರ ಗೆಲುವಿಗೆ ಶ್ರೀರಕ್ಷೆ. ಜತೆಗೆ ಹೊಸ ಮತದಾರರು ಮೋದಿ ಸರ್ಕಾರದ ಜನಪರ ಕಾರ್ಯ ಮೆಚ್ಚಿ ಜಾತಿ ಭೇದ ಮರೆತು ಬೆಂಬಲಿಸಿದ್ದಾರೆ. ಕಾರ್ಯಕರ್ತರ ಬಿಡುವಿಲ್ಲದ ಹೋರಾಟ ಕ್ಷೇತ್ರದಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಟ್ಟಿದೆ. ಕರಾವಳಿಯಲ್ಲಿ ಅಮಿತ್ ಶಾ ಹಾಗೂ ಮೋದಿ ಹೊಸ ಸಂಚಲನ ಮೂಡಿಸಿದ್ದಾರೆ
– ಕಾಪು ಕ್ಷೇತ್ರದ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.