ADVERTISEMENT

ಮಕ್ಕಳಲ್ಲಿ ಕಲೆಯ ಆಸಕ್ತಿ ಮೂಡಿಸಿ: ವೈದೇಹಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 5:38 IST
Last Updated 8 ಮಾರ್ಚ್ 2018, 5:38 IST

ಉಡುಪಿ: ‘ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ಪ್ರಕೃತಿ ಹಾಗೂ ಸಂಸ್ಕೃತಿಯ ಬಗ್ಗೆ ತಿಳಿವಳಿಕೆ ನೀಡುವ ಕೆಲಸವನ್ನು ಸಹ ಮಾಡಬೇಕು’ ಎಂದು ಸಾಹಿತಿ ವೈದೇಹಿ ಹೇಳಿದರು.

ಮಣಿಪಾಲ ಉನ್ನತ ಶಿಕ್ಷಣ ಅಕಾ ಡೆಮಿ (ಮಾಹೆ) ಮಣಿಪಾಲದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಮಂಗಳವಾರ ಏರ್ಪಡಿಸಿದ್ದ ‘ಪ್ರಕೃತಿ ಹಾಗೂ ಸಂಸ್ಕೃತಿ’ ಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ಮಕ್ಕಳಿಗೆ ಕಲೆಯಲ್ಲಿ ಆಸಕ್ತಿ ಮೂಡಿಸ ಬೇಕು. ಕಲೆಯ ಮೂಲಕ ಅವರು ಹೊಸ ಸ್ಫೂರ್ತಿಯನ್ನು ಪಡೆದುಕೊಳ್ಳುತ್ತಾರೆ. ಇಂತಹ ಯೋಜನೆಗಳನ್ನು ಪ್ರೋತ್ಸಾಹಿಸ ಬೇಕು ಹಾಗೂ ಎಲ್ಲ ಶಾಲೆಗಳಲ್ಲಿ ಕಲಾ ಪ್ರದರ್ಶನ ಆಯೋಜಿಸಬೇಕು ಎಂದು ಅವರು ಹೇಳಿದರು.

ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮತನಾಡಿ, ಮಕ್ಕಳಲ್ಲಿ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿದಾಗ ಸಾಮಾಜಿಕ ಪ್ರಗತಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಕಲಾ ಪ್ರದರ್ಶನ ಒಳ್ಳೆಯ ಪ್ರಯತ್ನವಾಗಿದೆ. ಕಲಾ ಪ್ರದರ್ಶನ ಆಯೋಜಿಸಿರುವ ಡಾ. ಉನ್ನಿಕೃಷ್ಣ ಮತ್ತು ಅವರ ತಂಡದ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಗಾಂಧಿ ಮತ್ತು ಶಾಂತಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ವರದೇಶ ಹಿರೇಗಂಗೆ ಅವರು ವೈದೇಹಿ ಅವರು ಎರಡು ಕವನಗಳನ್ನು ವಾಚಿಸಿದರು. ಸಂಸ್ಕೃತಿ ಮತ್ತು ಪ್ರಕೃತಿ ಶಿಕ್ಷಣ ಪಾತ್ರ ಮಹತ್ವದ್ದು ಎಂದು ಅವರು ಹೇಳಿದರು. ಮಣಿಕಾಲ ಶಿಕ್ಷಣ ಅಕಾಡೆಮಿಯ ಕಾರ್ಯದರ್ಶಿ ಡಾ. ಎಚ್. ಶಾಂತಾರಾಮ್, ಟಿಎಂಎ ಪೈ ಪಾಲಿಟೆಕ್ನಿಕ್‌ನ ಪ್ರಾಂಶುಪಾಲ ಪ್ರೊ. ಟಿ. ರಂಗಪೈ, ಮಣಿಪಾಲದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಲಕ್ಷ್ಮೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.