ADVERTISEMENT

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ: ಡಾ.ಜಿ.ಶಂಕರ್ ಸಲಹೆ

ಕೋಟ ಆನಂದೋತ್ಸವ, ಸನ್ಮಾನ, ಪ್ರತಿಭಾ ಪುರಸ್ಕಾರ ಸಮಾರಂಭ

​ಪ್ರಜಾವಾಣಿ ವಾರ್ತೆ
Published 10 ಜೂನ್ 2018, 11:18 IST
Last Updated 10 ಜೂನ್ 2018, 11:18 IST

ಕೋಟ(ಬ್ರಹ್ಮಾವರ): ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಆಗ ತಮ್ಮ ಬದುಕಿನಲ್ಲಿ ಸಾರ್ಥಕ ದಿನ ಕಾಣಬಹುದು. ಇದು ನಮ್ಮ ಹಿರಿಯರು ನೀಡಿದ ಬಹುದೊಡ್ಡ ಕೊಡುಗೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ ಶಂಕರ್ ಹೇಳಿದರು.

ಕೋಟ ಮಣೂರಿನ ಸಂಯುಕ್ತ ಪ್ರೌಢಶಾಲಾ ವಠಾರದ ಗೀತಾನಂದ ರಂಗಮಂದಿರದಲ್ಲಿ ಇತ್ತೀಚೆಗೆ ಕೋಟ ಪಡುಕೆರೆಯ ಗೀತಾನಂದ ಫೌಂಡೇಶನ್‌ನ ಆಶ್ರಯದಲ್ಲಿ ನಡೆದ ಆನಂದೋತ್ಸವ ಹಾಗೂ ಉಚಿತ ನೋಟ್‌ಬುಕ್ ವಿತರಣೆ, ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಗಾಲಿಕುರ್ಚಿ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಡಲ ತಡಿಯಂಥ ಪ್ರದೇಶವೆಂಬುವುದು ಶೈಕ್ಷಣಿಕ ಸಾಂಸ್ಕೃತಿಕವಾಗಿ ಬೆಳೆಯಲು ದಿ.ಕೆ.ಸಿ.ಕುಂದರ್ ಕಾರಣಿಕರ್ತರು ಎಂದರು.

ADVERTISEMENT

ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡ ಸಂಪನ್ಮೂಲ ವ್ಯಕ್ತಿಯಾಗಿ ಪರಿಸರದ ಬಗ್ಗೆ ಮಾಹಿತಿ ನೀಡಿದರು.

ಕೋಟ ಪಡುಕೆರೆ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾವ್ಕಂರ್, ಮೊಗವೀರ ಯುವ ಸಂಘ ಉಡುಪಿ ಜಿಲ್ಲಾಧ್ಯಕ್ಷ ಮಲ್ಪೆ ವಿನಯ ಕರ್ಕೆರ, ಕುಂದಾಪುರದ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪ್ರಕಾಶ್ ತೋಳಾರ್, ಗೀತಾನಂದ ಫೌಂಡೇಶನ್ ನಿರ್ದೇಶಕಿ ಗೀತಾ ಆನಂದ್ ಕುಂದರ್, ದಿವ್ಯಲಕ್ಷ್ಮೀ ಪ್ರಶಾಂತ್ ಕುಂದರ್, ವೈಷ್ಣವಿ ರಕ್ಷತ್ ಕುಂದರ್, ಮೊಗವೀರ ಯುವಸಂಘ ಕೋಟ ಘಟಕದ ಅಧ್ಯಕ್ಷ ಗಿರೀಶ್ ಬಂಗೇರ, ಮಹಿಳಾ ಘಟಕದ ಅಧ್ಯಕ್ಷೆ ಗುಲಾಬಿ ದೇವದಾಸ ಬಂಗೇರ, ಸಂಯುಕ್ತ ಪ್ರೌಢ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರವೀಂದ್ರ ಶೆಟ್ಟಿ, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಚ್ ಕುಂದರ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್  ಇದ್ದರು.

ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಉಚಿತ ನೋಟ್ ಬುಕ್ ವಿತರಿಸಲಾಯಿತು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸತೀಶ್ ಐತಾಳ್ ಸ್ವಾಗತಿಸಿದರು. ಜನತಾ ಫಿಶ್ ಮಿಲ್ ಸಮಾಜ ಕಾರ್ಯದ ವಿಭಾಗದ ರವಿಕಿರಣ್ ಕಾಂಚನ್ ಕೋಟ ವಾರ್ಷಿಕ ವರದಿ ವಾಚಿಸಿದರು. ಜನತಾ ಫಿಶ್‌ಮಿಲ್ ಸಿಬ್ಬಂದಿ ಐಶ್ವರ್ಯ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.