ADVERTISEMENT

ಮಾನವ ಸಂಪನ್ಮೂಲ ಸದ್ಬಳಕೆಯಾದರೆ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2012, 6:25 IST
Last Updated 4 ಅಕ್ಟೋಬರ್ 2012, 6:25 IST

ಕಾರ್ಕಳ: ಜನಸಂಖ್ಯೆ ಹೆಚ್ಚಿರುವುದು ಮುಖ್ಯವಲ್ಲ. ದೇಶದ ಮಾನವ ಸಂಪನ್ಮೂಲ ಸದ್ಬಳಕೆಯಾದಾಗ ಮಾತ್ರ ಅಭಿವೃದ್ಧಿ ಎಂದು  ಶಾಸಕ ಗೋಪಾಲ ಭಂಡಾರಿ ಇಲ್ಲಿ ತಿಳಿಸಿದರು.

ಇಲ್ಲಿನ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದಲ್ಲಿ ತಾಲ್ಲೂಕು ಜನಜಾಗೃತಿ ವೇದಿಕೆ ಹಾಗೂ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಕಳ ಘಟಕದ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ ನವಜೀವನ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಶಾಂತಿ ಸೌಹಾರ್ದತೆಗಾಗಿ ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧಿ ಅವರ ಕನಸು ಮಾನವ ಸಂಪನ್ಮೂಲದ ಬಳಕೆಯಾಗಬೇಕು ಎಂದೇ ಇತ್ತು. ಅವರು ಶಾಂತಿಯ ಸಂದೇಶ ಸಾರಿದರು. ಆ ಸಂದೇಶ ವಿಶ್ವದ ಎಲ್ಲ ದೇಶಗಳ ಗಮನ ಸೆಳೆದಿತ್ತು. ಗಾಂಧಿ ಶಾಂತಿ, ಅಹಿಂಸೆ ಹಾಗೂ ಸಹಬಾಳ್ವೆಯ ಪ್ರತೀಕವಾಗಿದ್ದರು. ಅವರ ಆದರ್ಶದಲ್ಲಿ ಸಮಾಜ ನಿರ್ಮಾಣವಾಗಬೇಕು. ಬದುಕಿನಲ್ಲಿ ಆತ್ಮವಿಶ್ವಾಸ ಬೆಳೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸಂಪನ್ಮೂಲ ವ್ಯಕ್ತಿ ವಿವೇಕ್ ವಿನ್ಸೆಂಟ್ ಪಾಯಸ್ ಕುಡಿತ ಬಿಡುಗಡೆಗೊಳಿಸಿದ ಸಾಧನೆಯ ಹಂತಗಳನ್ನು ಮಂಡಿಸಿದರು.

ಮೂಡಬಿದಿರೆ ಶಾಸಕ ಅಭಯಚಂದ್ರ ಜೈನ್ ಮಾತನಾಡಿ ಸುಮಾರು 37ಸಾವಿರ ಮಂದಿಯನ್ನು ಕುಡಿತದ ಚಟದಿಂದ ಬಿಡುಗಡೆಯಾಗುವಂತೆ ಪ್ರಯತ್ನಿಸಿದ ವೇದಿಕೆಯ ಸಾಧನೆ ಅತ್ಯಂತ ಮಹತ್ವದ್ದು ಎಂದರು.

ಮಾಜಿಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ ಗಾಂಧಿಯ ರಾಮರಾಜ್ಯದ ಕನಸು ಕುಡಿತದ ಚಟವನ್ನು ಬಿಡುಸುವ ಜತೆಯಲ್ಲಿ ಅಸ್ಪೃಶ್ಯತೆ, ಸ್ವದೇಶಿ ವಸ್ತು ಬಳಕೆ, ಮಹಿಳಾ ಸ್ವಾವಲಂಬನೆ, ಜಾತಿಮತ ರಹಿತ ಸಮಾಜವೂ ಆಗಿತ್ತು. ವಿಶೇಷವೆಂದರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವೆಲ್ಲವನ್ನೂ ಒಳಗೊಂಡಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.  

ತಾಲ್ಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ  ಪ್ರೇಮ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆಯ ವ್ಯವಸ್ಥಾಪಕರನ್ನು ಅಭಿನಂದಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾಧ್ಯಕ್ಷ ದುಗ್ಗೇಗೌಡ, ಪುರಸಭಾಧ್ಯಕ್ಷೆ ಪ್ರತಿಮಾ ಮೋಹನ್, ಮಹಾವೀರ ಹೆಗ್ಡೆ ಅಂಡಾರು, ಹರಿಶ್ಚಂದ್ರ ತೆಂಡೂಲ್ಕರ್, ಸುಭಾಶ್ಚಂದ್ರ ಚೌಟ, ನೀರೆ ಕೃಷ್ಣ ಶೆಟ್ಟಿ, ಯಶೋದಾ ಶೆಟ್ಟಿ, ವಾಸುದೇವ ನಾಯಕ್, ದೇವದಾಸ ಹೆಬ್ಬಾರ್, ರವಿ ಕುಮಾರ್, ಕಮಲಾಕ್ಷ ನಾಯಕ್ ಮತ್ತಿತರರು ಇದ್ದರು.

ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಚ್.ಎಲ್. ಮುರಲೀಧರ ಸ್ವಾಗತಿಸಿದರು. ಮಾಲತಿ, ಸುಶೀಲಾ ಕಾರ್ಯಕ್ರಮ ನಿರೂಪಿಸಿದರು. ಸುಮಿತ್ರಾ ಜೈನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.