ADVERTISEMENT

ಮಾರುಕಟ್ಟೆ ಮೇಲ್ಛಾವಣಿ ಕುಸಿತ

ಮಳೆ: ಮೀನು ಮಾರಾಟಗಾರರು ಸಂಕಷ್ಟದಲ್ಲಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2013, 9:36 IST
Last Updated 5 ಜೂನ್ 2013, 9:36 IST

ಬ್ರಹ್ಮಾವರ: ಸಾಲಿಗ್ರಾಮ ಪರಿಸರದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಸ್ಸುನಿಲ್ದಾಣದ ಬಳಿ ಇರುವ ಮೀನು ಮಾರುಕಟ್ಟೆಯ ಮೇಲ್ಛಾವಣಿ ಅರ್ಧಕ್ಕೆ ಕುಸಿದಿದ್ದು ಮೀನು ಮಾರಾಟಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಈ ಮೀನುಮಾರುಕಟ್ಟೆಗೆ ಸೋಮವಾರ ಬಂದ ಮಹಿಳೆಯರು ಮೇಲ್ಛಾವಣಿ ಕುಸಿದ ವಿಷಯವನ್ನು ಸಾಲಿಗ್ರಾಮ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಯ ಗಮನಕ್ಕೆ ತಂದರು. ಮುಖ್ಯಾಧಿಕಾರಿ ಮೇಬಲ್ ಡಿ'ಸೋಜ ಪಟ್ಟಣ ಪಂಚಾಯಿತಿ ಎಂಜಿನಿಯರ್ ಜತೆಯಲ್ಲಿ ಸ್ಥಳ ಪರಿಶೀಲನೆ ನಡೆಸಿ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬಗ್ಗೆ ಚರ್ಚಿಸಿದರು.

ಹೆದ್ದಾರಿಗೆ ಮಾರುಕಟ್ಟೆ: ಸುರತ್ಕಲ್‌ನಿಂದ ಕುಂದಾಪುರದವರೆಗೆ ಈಗಾಗಲೇ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು, ಮೀನುಮಾರುಕಟ್ಟೆಯು ಹೆದ್ದಾರಿ ಅಗಲೀಕರಣದ ಸಂದರ್ಭದಲ್ಲಿ  ರಸ್ತೆಯ ಪಾಲಾಗಲಿದೆ. ಆದ್ದರಿಂದ ತಾತ್ಕಾಲಿಕವಾಗಿ ದುರಸ್ತಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಆಗ್ರಹ: ಮುರಿದ ಮೇಲ್ಛಾವಣಿಯ ಕೆಳಗೆ 15ಕ್ಕೂ ಅಧಿಕ ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದು, ಪ್ರತೀ ದಿನ ನೂರಾರು ಗ್ರಾಹಕರು ಮೀನು ಖರೀದಿಗೆ ಮಾರುಕಟ್ಟೆಗೆ ಬರುತ್ತಿದ್ದಾರೆ. ಹಾಗಾಗಿ ಭಾರೀ ಅನಾಹುತ ಸಂಭವಿಸುವ ಮೊದಲೇ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮುರಿದ ಮೇಲ್ಛಾವಣಿಯನ್ನು ದುರಸ್ತಿಗೊಳಿಸುವ ಕಾರ್ಯ ನಡೆಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.