ADVERTISEMENT

ಮುಖಂಡರು ಅತೃಪ್ತರ ಮನವೊಲಿಸುತ್ತಾರೆ

ಅಧಿಕ ಮತಗಳಿಂದ ಗೆಲ್ಲುತ್ತೇನೆ: ಹಾಲಾಡಿ ಶ್ರೀನಿವಾಸ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 13:52 IST
Last Updated 13 ಏಪ್ರಿಲ್ 2018, 13:52 IST

ಉಡುಪಿ: ಅಸಮಾಧಾನಗೊಂಡಿರುವ ಪಕ್ಷದ ಸ್ಥಳೀಯ ಮುಖಂಡರನ್ನು ಪಕ್ಷದ ಅಧ್ಯಕ್ಷರು ಸಮಾಧಾನಪಡಿಸುತ್ತಾರೆ ಎಂದು ಮಾಜಿ ಶಾಸಕ ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದರು.

ಅಭ್ಯರ್ಥಿ ಆಯ್ಕೆಯನ್ನು ವಿರೋಧಿಸಿ ಕೆಲವು ಮುಖಂಡರು ಪಕ್ಷದ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಅವರು ಗುರುವಾರ ಪ್ರತಿಕ್ರಿಯಿಸಿದರು. ಪಕ್ಷ ಆಯ್ಕೆ ಮಾಡಿದ ಅಧಿಕೃತ ಅಭ್ಯರ್ಥಿ ಪರ ಎಲ್ಲ ಕಾರ್ಯಕರ್ತರು ಕೆಲಸ ಮಾಡಬೇಕಾಗುತ್ತದೆ. ಅವರ ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ನಾನು ಹೇಳಲಾರೆ. ಕಳೆದ ಬಾರಿ ಕಿಶೋರ್ ಕುಮಾರ್ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಆದರೂ ನಾನು ಜಯಗಳಿಸಿದೆ ಎಂದು ಹೇಳಿದರು.

ಕಳೆದ ಬಾರಿ ಮುನಿಸಿಕೊಂಡಿದ್ದ ಕೆಲವು ಮುಖಂಡರು ಈ ಬಾರಿ ನನ್ನೊಂದಿಗೆ ಇದ್ದಾರೆ. ಐದು ಜಿಲ್ಲಾ ಪಂಚಾಯಿತಿ ಸದಸ್ಯರು, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿಯ ಬಹುತೇಕ ಸದಸ್ಯರು ಸಹ ನನ್ನ ಜೊತೆಗೆ ಇದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಯಾರೇ ಸಹಕಾರ ನೀಡಿದರೂ ಬೇಡ ಎಂದು ಹೇಳುವುದಿಲ್ಲ. ಕಳೆದ ಬಾರಿಗಿಂತೂ ಈ ಬಾರಿ ಅಧಿಕ ಮತಗಳಿಂದ ಗೆಲ್ಲುವ ವಿಶ್ವಾಸ ಇದೆ. ನಾನು ಜನರೊಂದಿಗೇ ಇರುವುದರಿಂದ ಹಾಗೂ ಅವರು ಕೆಲಸವನ್ನು ನಿರಂತರವಾಗಿ ಮಾಡುವುದರಿಂದ ಚುನಾವಣೆ ವೇಳೆ ಪ್ರತ್ಯೇಕವಾಗಿ ಮತ ಕೇಳಲು ಹೋಗುವುದಿಲ್ಲ. ಕಳೆದ ಬಾರಿ ಸಹ ಒಂದೆರಡು ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸಿದ್ದೆ ಎಂದರು.

ADVERTISEMENT

ಮಾಜಿ ಶಾಸಕ ಎ.ಜಿ. ಕೊಡ್ಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಚುನಾವಣೆಗೆ ಸ್ಪರ್ಧಿಸುತ್ತಿರುವುದು ಸಂತೋಷ ಎಂದು ಅವರು ಹೇಳಿದ್ದಾರೆ. ಅವರ ಮಕ್ಕಳು ಸಹ ನನ್ನೊಂದಿಗೇ ಇದ್ದಾರೆ. ಹಾಗಾಗಿ ಅವರು ಮುನಿಸಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ಒಂದು ಪಕ್ಷ ಎಂದ ಮೇಲೆ ಕೆಲವು ಸಮಸ್ಯೆ ಇರುವುದು ಸಹಜ. ಅದು ರಾಷ್ಟ್ರ, ರಾಜ್ಯ ಹಾಗೂ ಸ್ಥಳೀಯ ಮಟ್ಟದಲ್ಲಿಯೂ ಇರುತ್ತದೆ ಎಂದರು. ಕೇಂದ್ರ ಸರ್ಕಾರದ ಸಾಧನೆ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ಆಧಾರದ ಮೇಲೆ ಮತ ಕೇಳುತ್ತೇನೆ ಎಂದರು.

**

ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿ ಎಂದು ಕೇಳು<br/>ವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ<br/>ರ ಹಕ್ಕು. ಅದೇ ರೀತಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕೇಳಿದ್ದಾರೆ – ಹಾಲಾಡಿ ಶ್ರೀನಿವಾಸ ಶೆಟ್ಟಿ,ಮಾಜಿ ಶಾಸಕ.

‌**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.