ADVERTISEMENT

ಯುಎಫ್‌ಎನ್:ಪ್ರತಿಜ್ಞಾ ಯಾತ್ರೆ ಸಮಾವೇಶ ರದ್ದು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2012, 10:25 IST
Last Updated 8 ಆಗಸ್ಟ್ 2012, 10:25 IST

ಮಂಗಳೂರು: ಯೂತ್ ಫಾರ್ ನೇಷನ್ ಸಂಘಟನೆ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಮಂಗಳವಾರ ಆಯೋಜಿಸಲಾದ ಭ್ರಷ್ಟಾಚಾರ ವಿರೋಧಿ `ಪ್ರತಿಜ್ಞಾ ಯಾತ್ರೆ~ಯ ಸಮಾವೇಶವನ್ನು ಕೊನೇ ಕ್ಷಣದಲ್ಲಿ ರದ್ದುಪಡಿಸಲಾಯಿತು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಇದೇ 4ರಂದು ಹೊರಟಿದ್ದ ಪ್ರತಿಜ್ಞಾ ಯಾತ್ರೆ  ಮಂಗಳವಾರ ನಗರವನ್ನು ತಲುಪಿತು. ಯಾತ್ರೆ ಅಂಗವಾಗಿ ಎಸ್‌ಡಿಎಂ ಕಾಲೇಜು ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ವಿದ್ಯಾರ್ಥಿಗಳ ಬೈಕ್ ರ‌್ಯಾಲಿ ನಡೆಯಬೇಕಿತ್ತು. ಆದರೆ ಮಳೆಯ ಕಾರಣ ರ‌್ಯಾಲಿ ರದ್ದುಪಡಿಸಿದೆವು. ಸೆಪ್ಟೆಂಬರ್‌ನಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳುತ್ತೇವೆ~ ಎಂದು ಯೂತ್ ಫಾರ್ ನೇಷನ್ ಸಂಘಟನೆಯ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಅಶ್ವತ್ಥ್ ಹೆಗಡೆ ತಿಳಿಸಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿದ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಕುಮಾರ್, `ಭ್ರಷ್ಟಾಚಾರ ವಿರೋಧಿ ಹೋರಾಟ ತಂಡವನ್ನು ಅಣ್ಣಾ ಹಜಾರೆ ವಿಸರ್ಜಿಸಿದ್ದಾರೆ. ಇದೇ 9ರಂದು ಬಾಬಾ ರಾಮದೇವ್ ಉಪವಾಸ ಆರಂಭಿಸಲಿದ್ದಾರೆ. ಈ ನಡುವಿನ ಅವಧಿಯಲ್ಲಿ ಭ್ರಷ್ಟಾಚಾರ ವಿರೋಧಿ ಚಳವಳಿ ಜೀವಂತವಾಗಿಡಲು ನಾವು ಪ್ರತಿಜ್ಞಾ ಯಾತ್ರೆ ಹಮ್ಮಿಕೊಂಡಿದ್ದೇವೆ~ ಎಂದರು.

`ರಾಜ್ಯದಲ್ಲಿ ಲೋಕಾಯುಕ್ತರ ನೇಮಕ ಮಾಡುವಂತೆ ಒತ್ತಾಯಿಸುತ್ತೀರಾ?~ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, `ನಮ್ಮ ಹೋರಾಟ ವ್ಯಕ್ತಿಗತವಾಗಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವುದಕ್ಕೆ ಸೀಮಿತ. ಹಾಗಾಗಿ ಲೋಕಾಯುಕ್ತ ನೇಮಕದ ಬಗ್ಗೆ ಯಾವುದೇ ಬೇಡಿಕೆ ಹೊಂದಿಲ್ಲ. ಹಜಾರೆ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ, ಅದನ್ನೂ ಬೆಂಬಲಿಸುವುದಿಲ್ಲ~ ಎಂದರು.

ಕೊನೆಕ್ಷಣದಲ್ಲಿ ಕಾರ್ಯಕ್ರಮ ರದ್ದುಪಡಿಸಿದ್ದಕ್ಕಾಗಿ ಕ್ಷಮೆ ಯಾಚಿಸಿದ ಅಶ್ವತ್ಥ್ ಹೆಗಡೆ, `ಸೆಪ್ಟೆಂಬರ್ ತಿಂಗಳಲ್ಲಿ ಯುವಕರಿಗಾಗಿ ಉದ್ಯೋಗ ಮೇಳ ಹಮ್ಮಿಕೊಳ್ಳುತ್ತೇವೆ~ ಎಂದರು.ಅಜಿತ್ ಬೋಪಯ್ಯ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 
 
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.