ADVERTISEMENT

ರಾಷ್ಟ್ರೀಯ ಆಹಾರ ಭದ್ರತೆಗೆ ಸಾವಯವ ಬುನಾದಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 9:55 IST
Last Updated 4 ಮಾರ್ಚ್ 2012, 9:55 IST

ಉಡುಪಿ: ಕಡಿಮೆ ಬೀಜ, ಕಡಿಮೆ ನೀರು, ಕಡಿಮೆ ಕಾರ್ಮಿಕರ ದುಡಿಮೆ, ಕಡಿಮೆ ರಾಸಾಯನಿಕಗಳ ಪರಿಕರಗಳನ್ನು ಬಳಸಿ ಅಧಿಕ ಭತ್ತದ ಇಳುವರಿಯನ್ನು ಪಡೆಯುವ ಶ್ರೀಪದ್ಧತಿ ಭತ್ತದ ಕೃಷಿಯನ್ನು ಕರಾವಳಿ ಜಿಲ್ಲೆಯ ರೈತರು ಹೆಚ್ಚು ಹೆಚ್ಚು ಅನುಷ್ಠಾನಕ್ಕೆ ತರಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವಿಜಯಕುಮಾರ್ ನಾಗನಾಳ ಇಲ್ಲಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಳೆದ ಎರಡು ವರ್ಷಗಳಿಂದ ರಾಜ್ಯದ 11 ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅಳವಡಿಸಲು ಗ್ರಾಮಾಭಿವೃದ್ಧಿ ಯೋಜನೆಯು ನಬಾರ್ಡ್ ಬ್ಯಾಂಕ್‌ನ ನೆರವಿನೊಂದಿಗೆ ಸತತವಾಗಿ ಶ್ರಮಿಸುತ್ತಿದೆ.
 
ಇದರ ಪರಿಣಾಮ ಸಣ್ಣ ಹಾಗೂ ಅತಿ ಸಣ್ಣ ರೈತರಿಗೂ ಅನುಕೂಲವಾಗಿದೆ. ರಾಜ್ಯದ ಮಂಗಳೂರು, ಉಡುಪಿ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ರೈತರು ಶ್ರೀಪದ್ಧತಿಯಿಂದ ಬೆಳೆ ತೆಗೆಯುತ್ತ ಲಾಭ ಪಡೆಯುತ್ತಿದ್ದಾರೆ~ ಎಂದರು.

`ಉಡುಪಿ ಜಿಲ್ಲೆಯಲ್ಲಿ ಶ್ರೀಪದ್ಧತಿ ಭತ್ತದ ಕೃಷಿ ಅನುಷ್ಠಾನ ಮಾಡಿರುವ ರೈತರ ಸಂಖ್ಯೆ 12,382 ಆಗಿದ್ದು ಸುಮಾರು 18,573 ಎಕರೆ ವಿಸ್ತೀರ್ಣದಲ್ಲಿ ರೈತರು ಬೆಳೆಬೆಳೆಯುತ್ತಿದ್ದಾರೆ. ದ.ಕ.ಜಿಲ್ಲೆಯಲ್ಲಿ 2,105 ರೈತರು ಭತ್ತ ಬೆಳೆಯುತ್ತಿದ್ದು 2,526 ಎಕರೆ ಜಾಗದಲ್ಲಿ ಭತ್ತ ಬೆಳೆಯಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 29,108 ರೈತರು ಶ್ರೀಪದ್ಧತಿ ವಿಧಾನದಲ್ಲಿ ಭತ್ತ ಬೆಳೆಯುತ್ತಿದ್ದು 38,379 ಎಕರೆ ಜಾಗದಲ್ಲಿ ಭತ್ತ ಬೆಳೆಯಲಾಗುತ್ತಿದೆ~ ಎಂದರು.

`ಭತ್ತದ ಕೃಷಿ ಕಷ್ಟ ಹಾಗೂ ಲಾಭಕರವಲ್ಲ ಎನ್ನುವ ಮನೋಭಾವ ರೈತರಲ್ಲಿದೆ. ಹಾಗಾಗಿ ಅವರು ಭತ್ತದ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಶ್ರೀಪದ್ಧತಿ ಅನುಸರಿಸಿದಲ್ಲಿ ರೈತರಿಗೆ ಲಾಭವಾಗಲಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೇಂದ್ರ ಸಂಪರ್ಕಿಸಬಹುದು~ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಶವ ಗೌಡ ಹಾಗೂ ಗುಣಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.