ADVERTISEMENT

‘ವರ್ಣರಂಜಿತ ಸುಳ್ಳು ಹೇಳಿದ ಪ್ರಧಾನಿ ಮೋದಿ’

ಕೇಂದ್ರ ಸರ್ಕಾರದ 4 ವರ್ಷಗಳ ಆಡಳಿತ ವೈಫಲ್ಯ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಮೇ 2018, 10:47 IST
Last Updated 27 ಮೇ 2018, 10:47 IST

ಉಡುಪಿ: ‘ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ವರ್ಣರಂಜಿತ ಸುಳ್ಳುಗಳನ್ನು ಹೇಳಿದ್ದಾರೆ. ಚುನಾವಣೆಗೂ ಮುನ್ನ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ’ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಗೀತಾ ವಾಗ್ಲೆ ಟೀಕಿಸಿದರು.

ನಗರದ ಹುತಾತ್ಮ ಸೈನಿಕರ ಯುದ್ಧ ಸ್ಮಾರಕದ ಎದುರು ಶನಿವಾರ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ 4 ವರ್ಷಗಳ ಆಡಳಿತ ವೈಫಲ್ಯದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬಂದರೆ 50 ದಿನಗಳಲ್ಲಿ ವಿದೇಶದಿಂದ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹15 ಲಕ್ಷ ಹಾಕುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. 1,460 ದಿನಗಳ ಕಾಲ ಮೋದಿ ಆಡಳಿತ ನಡೆಸಿದ್ದರೂ ಯಾರ ಖಾತೆಗೂ ಹಣ ಜಮೆಯಾಗಿಲ್ಲ ಎಂದು ವ್ಯಂಗ್ಯವಾಡಿದರು.

ADVERTISEMENT

‘ನಮಾಮಿ ಗಂಗ’ ಹೆಸರಿನಲ್ಲಿ ಸಾವಿರಾರು ಕೋಟಿ ಅನುದಾನ ಮೀಸಲಿಡಲಾಯಿತು. ಇದುವರೆಗೂ ಗಂಗಾ ನದಿ ಶುದ್ಧಿಯಾಗಿಲ್ಲ. ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಜನರಿಗೆ ಉಪಯೋಗವಾಗುವ ಯಾವ ಕೆಲಸವನ್ನೂ ಬಿಜೆಪಿ ಮಾಡಿಲ್ಲ ಎಂದು ಗೀತಾ ವಾಗ್ಳೆ ವಾಗ್ದಾಳಿ ನಡೆಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಸಿಲಿಂಡರ್ ಬೆಲೆ ₹ 10 ಹೆಚ್ಚಾದರೂ ಬಿಜೆಪಿ ಮುಖಂಡರು ಬೀದಿಗಿಳಿಯುತ್ತಿದ್ದರು. ಈಗ ಸಿಲಿಂಡರ್ ಬೆಲೆ ಗಗನಕ್ಕೇರುತ್ತಿದ್ದರೂ ಮೋದಿ ಭಕ್ತರು ಸುಮ್ಮನಿದ್ದಾರೆ. ಬಿಜೆಪಿ ಸರ್ಕಾರದ ಸುಳ್ಳುಗಳ ಬಗ್ಗೆ ಮತದಾರರಿಗೆ ಅರಿವಿದ್ದು, ಮುಂದಿನ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.

ಎಐಸಿಸಿ ಸದಸ್ಯ ಅಮೃತ್ ಶೆಣೈ ಮಾತನಾಡಿ, ‘2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ 400 ಕಡೆಗಳಲ್ಲಿ ಭಾಷಣ ಮಾಡಿದರು. ಯಾವುದು ಅಸಾಧ್ಯವೊ ಅದನ್ನೆಲ್ಲ ಮಾಡುವುದಾಗಿ ನಂಬಿಕೆ ಹುಟ್ಟಿಸಿದ್ದರು. ಆದರೆ, ನಾಲ್ಕು ವರ್ಷಗಳ ಆಡಳಿತದಲ್ಲಿ ಭರವಸೆಗಳು ಹುಸಿಯಾಗಿವೆ’ ಎಂದು ಟೀಕಿಸಿದರು.

ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ, ಈಗ ಯುವಕರಿಗೆ ಪಕೋಡ ಮಾರಲು ಹೇಳುತ್ತಿದ್ದಾರೆ. ಚೀನಾ, ಪಾಕಿಸ್ತಾನದ ಸದ್ದಡಗಿಸುವುದಾಗಿ ಹೇಳಿ ಈಗ ಆ ರಾಷ್ಟ್ರಗಳ ಜತೆಗೆ ಸ್ನೇಹಹಸ್ತ ಚಾಚಿದ್ದಾರೆ ಎಂದು ಕುಟುಕಿದರು.

ಸಂಸದರಾದ ಬಳಿಕ ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ಭಾವನಾತ್ಮಕವಾಗಿ ಮಾತನಾಡಿ ಅಧಿಕಾರ ಪಡೆದ ಅವರು ಬಿಜೆಪಿ ಸಾಧನೆಗಳನ್ನು ಜನರಿಗೆ ತಿಳಿಸಬೇಕು. ಯುಪಿಎ ಅವಧಿಯಲ್ಲಿ ಎಫ್‌ಡಿಐ ವಿರೋಧಿಸಿದ್ದ ಬಿಜೆಪಿ, ಈಗ ಹಲವು ಕ್ಷೇತ್ರಗಳಲ್ಲಿ ಶೇ 100ರಷ್ಟು ವಿದೇಶಿ ಬಂಡವಾಳ ಹೂಡಲು ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯ ದೇಶಭಕ್ತಿ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.

ದಲಿತರ, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಸಂಸದರಾದ ಪ್ರತಾಪ್‌ ಸಿಂಹ, ನಳಿನ್‌ ಕುಮಾರ್ ಕಟೀಲ್‌, ಶೋಭಾ ಕರಂದ್ಲಾಜೆ, ಅನಂತ್ ಕುಮಾರ್‌ ಹೆಗಡೆ ಬಾಯಿಬಿಟ್ಟರೆ ದ್ವೇಷ ಕಾರುತ್ತಾರೆ. ಸಾಮರಸ್ಯದ ಒಂದೂ ಮಾತು ಆಡುವುದಿಲ್ಲ ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಮುಖಂಡರಾದ ಮಲ್ಲಿಕಾ ಬಾಲಕೃಷ್ಣನ್‌, ಮೀನಾಕ್ಷಿ ಮಾಧವ ಬನ್ನಂಜೆ, ನರಸಿಂಹ ಮೂರ್ತಿ, ವೆರನಿಕ ಕರ್ನೆಲಿಯೊ, ಸರಳಾ ಕಾಂಚನ್, ಭಾಸ್ಕರ್ ಕಿದಿಯೂರು, ಸುಜಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.