ADVERTISEMENT

ವಾರದ ಬಳಿಕ ಉದ್ಯಾವರಕ್ಕೆ ಕರೆಂಟ್ ಭಾಗ್ಯ

ಜನರ ಸಹಕಾರದಿಂದ ಹೊಸ ತಂತಿ ಜೋಡಣೆ ಕಾರ್ಯ ಪೂರ್ಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 9:25 IST
Last Updated 4 ಜೂನ್ 2018, 9:25 IST
ಉದ್ಯಾವರ ಬೋಲ್ಜೆಯಲ್ಲಿ ಸಾರ್ವಜನಿಕರ ಸಹಕಾರದಿಂದ ಜೋಡಿಸಲಾದ ಹೊಸ ತಂತಿ ಕಂಬ
ಉದ್ಯಾವರ ಬೋಲ್ಜೆಯಲ್ಲಿ ಸಾರ್ವಜನಿಕರ ಸಹಕಾರದಿಂದ ಜೋಡಿಸಲಾದ ಹೊಸ ತಂತಿ ಕಂಬ   

ಶಿರ್ವ: ಮಳೆಯ ಅಬ್ಬರದ ಪರಿಣಾಮ ವಿದ್ಯುತ್‌ ಇಲ್ಲದೇ ಪರದಾಡಿದ  ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಮನೆಗಳಲ್ಲಿ ಕೊನೆಗೂ ಬೆಳಕಿನ ಭಾಗ್ಯ ಸಿಕ್ಕಿದೆ.

ವಾರದಿಂದ ಉಡುಪಿ ತಾಲ್ಲೂಕಿನ ಉದ್ಯಾವರ, ಬೋಳಾರ್ಗುಡ್ಡೆ, ಪಿತ್ರೋಡಿ, ಬೊಳ್ಜೆ ಪ್ರದೇಶಗಳಲ್ಲಿ ಕರೆಂಟ್ ಕೈಕೊಟ್ಟಿತ್ತು. ಇದರಿಂದ ಜನರು ಕಂಗಾಲಾಗಿದ್ದರು. ಮೆಸ್ಕಾಂ ಇಲಾಖೆ ಸರಿಪಡಿಸದೆ ಇರುವ ಕಾರಣದಿಂದ ಜನರು ಪರದಾಡಿದ್ದರು.  ಮೆಸ್ಕಾಂ ಜತೆಗೆ ಉದ್ಯಾವರ ಬೊಳ್ಜೆಯ ಗ್ರಾಮಸ್ಥರೂ ಕೈಜೋಡಿಸಿದ ಪರಿಣಾಮ ವಿದ್ಯುತ್‌ ಭಾಗ್ಯ ಕಾಣುವಂತಾಗಿದೆ. 

ವಿದ್ಯುತ್‌ ಕಂಬಗಳು ಬಿದ್ದ ಪರಿಣಾಮ ಮನೆಯಲ್ಲಿ ವಿದ್ಯುತ್‌ ಇಲ್ಲದೆ ಪರದಾಟ, ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ವಾರಗಟ್ಟೆಲೆ ನೀರು ಇಲ್ಲದೆ ಬಟ್ಟೆಗಳನ್ನು ಕೂಡಾ ತೊಳೆಯದೆ ಇರುವಂತ ಸ್ಥಿತಿ ನಿರ್ಮಾಣ ಆಗಿತ್ತು. ಆದರೆ, ಈಗ ಸ್ಥಳೀಯರ ಸಹಕಾರ ಪಡೆದು ವಿದ್ಯುತ್ ಕಂಬ  ಹಾಗೂ ಹೊಸ ತಂತಿ ಜೋಡಣೆಯಿಂದಾಗಿ ವಿದ್ಯುತ್‌ ಕಾಣುವಂತಹ ಸ್ಥಿತಿ ಬಂದಿದೆ ಎಂದು ಜನರು ಖುಷಿ ಪಟ್ಟರು.

ADVERTISEMENT

ಉದ್ಯಾವರ ಅಂಕುದ್ರು ಪರಿಸರಕ್ಕೆ ವಿದ್ಯುತ್ ಜೋಡಣೆ ಮಾಡುವ ಕೆಲಸ ಪ್ರಗತಿಯಲ್ಲಿದೆ. ಇಲ್ಲಿನ ಜನರ ಸಮಸ್ಯೆಯೂ ನಿವಾರಣೆಯಾಗಲಿದೆ ಎಂದು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಕಿರಣ್ ಕುಮಾರ್ ಪಿತ್ರೋಡಿ ತಿಳಿಸಿದರು.

ಉದ್ಯಾವರ ವ್ಯಾಪ್ತಿಯಲ್ಲಿ ಸುಮಾರು 50 ಕ್ಕೂ ಅಧಿಕ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು, ಕಂಬ ತುಂಡಾಗಿ, ಸಾವಿರಾರು ಮೀಟರ್ ತಂತಿಗೆ ಹಾನಿ ಉಂಟಾಗಿದೆ. ಈಗ ದುರಸ್ತಿ ಕಾರ್ಯವೂ ಮಾಡಿರುವುದರಿಂದ ಕೆಲವು ಕಡೆಗಳಲ್ಲಿ ವಿದ್ಯುತ್‌ ಸಿಗುವಂತಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ಮೆಸ್ಕಾಂ ಸಿಬ್ಬಂದಿ ಕೊನೆಗೂ ಕೆಲಸ ಮಾಡಿ ವಾರದ ಬಳಿಕವಾದರೂ ನಮಗೆ ವಿದ್ಯುತ್‌ ಒದಗಿಸಿಕೊಟ್ಟಿದ್ದಾರೆ ಎಂದು ಶಶಿಧರ್ ಬೊಳ್ಜೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.