ADVERTISEMENT

ವಿದ್ಯುತ್ ವ್ಯತ್ಯಯ ಖಂಡಿಸಿ ಪ್ರತಿಭಟನೆ

ರೈತಸಂಘದ ನೇತೃತ್ವದಲ್ಲಿ ಮೆಸ್ಕಾಂ ಕಚೇರಿ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 11:03 IST
Last Updated 16 ಜೂನ್ 2018, 11:03 IST

ಬೈಂದೂರು: ಬೈಂದೂರು ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಆಗುತ್ತಿರುವ ವಿದ್ಯುತ್ ವ್ಯತ್ಯಯ ವಿರೋಧಿಸಿ ಬೈಂದೂರು ರೈತಸಂಘ ಹಾಗೂ ನಾಗರಿಕರು ಶುಕ್ರವಾರ ಇಲ್ಲಿನ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕುಂದಾಪುರ ತಾಲ್ಲೂಕು ರೈತಸಂಘದ ಅಧ್ಯಕ್ಷ ಎನ್. ದೀಪಕ್ ಕುಮಾರ್ ಶೆಟ್ಟಿ, ಬೈಂದೂರು ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ದಿನಗಟ್ಟಲೆ ವ್ಯತ್ಯಯ ಆಗುತ್ತಿದೆ. ಇದಕ್ಕೆ ಅಧಿಕಾರಿಗಳ ಮತ್ತು ಸಿಬ್ಬಂದಿ ಬೇಜವಾಬ್ದಾರಿ ಕಾರಣ. ಅವರು ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬದಲಾಗಿ ಹಾರಿಕೆ ಉತ್ತರ ನೀಡಿ ಸಮಾಧಾನಪಡಿಸುತ್ತಿದ್ದಾರೆ. ಗ್ರಾಹಕರು ದೂರವಾಣಿ ಮೂಲಕ ದೂರು ನೀಡಿದರೆ ಸೌಜನ್ಯಯುತ ಉತ್ತರ ಸಿಗುತ್ತಿಲ್ಲ ಎಂದು ದೂರಿದರು.

ಬೈಂದೂರು ತಾಲ್ಲೂಕು ರೈತಸಂಘದ ಅಧ್ಯಕ್ಷ ಎನ್. ದಿವಾಕರ ಶೆಟ್ಟಿ ಮಾತನಾಡಿ, ಸಂಜೆ ಬಳಿಕ ವಿದ್ಯುತ್ ಕಡಿತಗೊಂಡರೆ ಅದನ್ನು ದುರಸ್ತಿಪಡಿಸಲು ಸಿಬ್ಬಂದಿ ಇಲ್ಲ. ಗ್ರಾಮಗಳಲ್ಲಿ ಕೆಲಸ ನಿರ್ವಹಿಸುವ ಲೈನ್‌ಮೆನ್‌ಗಳು ಸಾಮಾನ್ಯರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ವಿದ್ಯುತ್ ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ. ಗ್ರಾಮೀಣ ಪ್ರದೇಶಗಳಲ್ಲಿ ಎರಡು, ಮೂರು ದಿನ ವಿದ್ಯುತ್ ನಿಲುಗಡೆ ಆಗುತ್ತಿದೆ. ಅಲ್ಲದೆ ಸಣ್ಣಪುಟ್ಟ ಅಡಚಣೆ ಹಾಗೂ ತೊಂದರೆ ನೆಪ ಇಟ್ಟುಕೊಂಡು ವಿದ್ಯುತ್ ಕಡಿತ ಮಾಡುವ ಪರಿಪಾಠ ಬೆಳೆಯುತ್ತಿದೆ ಎಂದು ಆರೋಪಿಸಿದರು.

ADVERTISEMENT

ಸಮಜಾಯಿಷಿ ನೀಡಿದ ಎಂಜಿನಿಯರ್: ಪ್ರತಿಭಟನೆ ನಡೆಸಿದವರಿಗೆ ಸಮಜಾಯಿಷಿ ನೀಡಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಯಶವಂತ್ ವ್ಯತ್ಯಯಕ್ಕೆ ಕಾರಣ ತಿಳಿಸಿದರು. ಕಳೆದ ವಾರವಿಡೀ ಭಾರಿ ಗಾಳಿ ಬೀಸಿದ ಪರಿಣಾಮ ಹಲವೆಡೆ ಮರದ ಗೆಲ್ಲು ವಿದ್ಯುತ್ ತಂತಿಯ ಮೇಲೆ ಬಿದ್ದು ಹಾನಿಯಾಯಿತು. ಹಲವು ಕಂಬ ಬಿದ್ದುವು. ಮಳೆಯ ಕಾರಣ ಶೀಘ್ರವೇ ದುರಸ್ತಿ ಕಾರ್ಯ ಮಾಡಲು ಸಾಧ್ಯವಾಗದ ಕಾರಣ ಕೆಲವು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ಏರುಪೇರು ಆಗಿದೆ. ಮುಖ್ಯವಾಗಿ ಹಿರಿಯಡಕ ಪೂರೈಕೆ ಕೇಂದ್ರಕ್ಕೆ ಬೈಂದೂರು ಕೊನೆ ವಿತರಣಾ ಕೇಂದ್ರ. ಈ ದೀರ್ಘ ಮಾರ್ಗದಲ್ಲಿ ಎಲ್ಲಿ ಅಡಚಣೆಯಾದರೂ ಅದರ ಪ್ರಭಾವ ಇಲ್ಲಿನ ವ್ಯವಸ್ಥೆ ಮೇಲಾಗುತ್ತದೆ. ಇದು ಇಂತಹ ತಾಂತ್ರಿಕ ಕಾರಣಗಳಿಂದ ಆಗುವ ಸಮಸ್ಯೆಯೇ ಹೊರತು ಉದ್ದೇಶ ಪೂರ್ವಕವಾಗಿ ಮಾಡುತ್ತಿಲ್ಲ. ಇನ್ನು ಮುಂದೆ ಇಂತಹ ಸಮಸ್ಯೆ ಬಾರದಂತೆ ನಮ್ಮ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ ಸೇರಿದಂತೆ ಮುಖಂಡರು, ರೈತಸಂಘದ ಸದಸ್ಯರು ಇದ್ದರು.

ಸಮಸ್ಯೆಗೆ ತಕ್ಷಣವೇ ಪರಿಹಾರ ದೊರೆಯದಿದ್ದರೆ ಶಾಸಕರ ನೇತೃತ್ವದಲ್ಲಿ ಮೆಸ್ಕಾಂ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ನಡೆಸಲಾಗುವುದು
ದೀಪಕ್‌ಕುಮಾರ ಶೆಟ್ಟಿ, ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.