ADVERTISEMENT

ವಿಶ್ವಕಪ್ ಸಮರ- ಉಡುಪಿಯಲ್ಲಿ ಕ್ರಿಕೆಟ್ ಜ್ವರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 8:10 IST
Last Updated 30 ಮಾರ್ಚ್ 2011, 8:10 IST
ವಿಶ್ವಕಪ್ ಸಮರ- ಉಡುಪಿಯಲ್ಲಿ ಕ್ರಿಕೆಟ್ ಜ್ವರ
ವಿಶ್ವಕಪ್ ಸಮರ- ಉಡುಪಿಯಲ್ಲಿ ಕ್ರಿಕೆಟ್ ಜ್ವರ   

ಉಡುಪಿ: ಮೊಹಾಲಿಯಲ್ಲಿ ಬುಧವಾರ ನಡೆಯುವ ಭಾರತ-ಪಾಕಿಸ್ತಾನ್ ಕ್ರಿಕೆಟ್ ಕದನಕ್ಕೆ ಉಡುಪಿಯಲ್ಲಿ ಕೂಡ ಸಾಕಷ್ಟು ಕ್ರಿಕೆಟ್ ಜ್ವರ ಕಾಣಿಸಿಕೊಂಡಿದೆ. ಇಲ್ಲಿನ ಕ್ರಿಕೆಟ್ ಅಭಿಮಾನಿಗಳಲ್ಲಿ ಕೆಲವರು ತಲೆಮೇಲೆ ‘ವರ್ಲ್ಡ್‌ಕಪ್’ ಮಾದರಿಯಲ್ಲಿ ಕೂದಲನ್ನು ಕತ್ತರಿಸಿಕೊಂಡು ಕ್ರಿಕೆಟ್ ಪ್ರೇಮವನ್ನು ಮೆರೆದರೆ ಜಿಲ್ಲಾ ನಾಗರಿಕ ಸಮಿತಿಯವರು ರಾಷ್ಟ್ರಧ್ವಜವನ್ನು ಹಿಡಿದು ನಗರದಲ್ಲಿ ಮೆರವಣಿಗೆ ಮಾಡಿದರು.

ಕುತ್ಪಾಡಿ- ಪಡುಕೆರೆಯ ಅವಿನಾಶ್ ಕುಮಾರ್ ಕ್ರಿಕೆಟ್ ಪ್ರೇಮಿ. ನಮ್ಮ ದೇಶದ ತಂಡವೇ ಕ್ರಿಕೆಟ್ ಗೆಲ್ಲಲಿ ಎನ್ನುವ ಕಾರಣಕ್ಕೆ ‘ವಿಶ್ವ ಕಪ್’ ಮಾದರಿಯಲ್ಲಿ ತಲೆಗೂದಲು ಕತ್ತರಿಸಿಕೊಂಡಿದ್ದಾರೆ. ಸೆಮಿಫೈನಲ್‌ನ ರೋಚಕ ಪಂದ್ಯವನ್ನು ವೀಕ್ಷಿಸಲು ಅವರು ತುದಿಗಾಲಲ್ಲಿ ನಿಂತಿದ್ದಾರೆ. ಅವರಂತೆಯೇ ಇನ್ನೂ ಅನೇಕರು ಕ್ರಿಕೆಟ್ ಜ್ವರ ಅಂಟಿಸಿಕೊಂಡಿವರು ಇಲ್ಲಿದ್ದಾರೆ.

‘ಫೈನಲ್ ಪಂದ್ಯಕ್ಕಿಂತ ಇಂಡೊ-ಪಾಕ್ ಸೆಮಿಫೈನಲ್ ಪಂದ್ಯವೇ ಹೆಚ್ಚು ರೋಚಕ. ಬಾಲ್ ಟು ಬಾಲ್ ನೋಡಬೇಕು ಎನ್ನುವುದು ನಮ್ಮ ಆಸೆ. ಹೀಗಾಗಿ ಈ ಮ್ಯಾಚ್‌ಗಾಗಿ ನಾವು ನಮ್ಮ ಸ್ನೇಹಿತರೆಲ್ಲ ನಾವು ಒಂದು ದಿನ ಓದುವುದನ್ನು ಬಿಟ್ಟು ಟಿ.ವಿ. ನೋಡುತ್ತ ಕುಳಿತುಕೊಳ್ಳುವ ಎನ್ನುವ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನಿಶಾಂತ್ ವೈದ್ಯ ಹೇಳಿದರು.

ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ, ಪಾಕಿಸ್ತಾನದ ವಿರುದ್ಧ ಭಾರತ ಈ ಪಂದ್ಯವನ್ನು ಗೆಲ್ಲಲಿ ಎನ್ನುವ ಉದ್ದೇಶದಿಂದ ನಗರದಲ್ಲಿ ರಾಷ್ಟ್ರಧ್ವಜದ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ  ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಬೀಡಿನಗುಡ್ಡೆಯಿಂದ ಆರಂಭವಾದ ಈ ಮೆರವಣಿಗೆಯಲ್ಲಿ ಚಂಡೆ ಬಳಗವೂ ಸೇರಿಕೊಂಡು ಇನ್ನಷ್ಟು ಮೆರಗು ೀಡಿತ್ತು.

ಅಲ್ಲಿಂದ ಸಾಗಿದ ಮೆರವಣಿಗೆ ಐಡಿಯಲ್ ಜಂಕ್ಷನ್, ಡಯಾನಾ ವೃತ್ತ, ಚರ್ಚ್ ರೋಡ್, ಕೆ.ಎಂ.ಮಾರ್ಗವಾಗ ಸರ್ವೀಸ್ ಬಸ್ ನಿಲ್ದಾಣದ ಬಳಿಯ ಕ್ಲಾಕ್ ಟವರ್ ಎದುರು ಸೇರಿದ ಜನರು ಭಾರತ ಗೆಲ್ಲಲಿ ಎನ್ನುವ ಘೋಷಣೆ ಕೂಗಿದರು. ಒಟ್ಟಿನಲ್ಲಿ ಬಿರು ಬಿಸಿಲಿನ ವಾತಾವರಣದೊಂದಿಗೆ ಕ್ರಿಕೆಟ್ ಮಹಾಸಮರದ ಬಿಸಿಯೂ ಉಡುಪಿಗೆ ತಟ್ಟಿದ್ದು ಗಮನಕ್ಕೆ ಬಂತು.

ಮೂಲ್ಕಿ: ಹಳ್ಳಿಯಲ್ಲೂ ಕ್ರಿಕೆಟ್ ಬೆಟ್ಟಿಂಗ್ ಹಾವಳಿ
ಮೂಲ್ಕಿ: ವಿಶ್ವಕಪ್‌ನ ಮಹಾಸಮರಕ್ಕೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆ ಕ್ರಿಕೆಟ್ ಜ್ವರ ಗ್ರಾಮೀಣ ಪ್ರದೇಶವನ್ನೂ ವ್ಯಾಪಿಸಿದೆ. ಮೂಲ್ಕಿಯ ಆಸುಪಾಸಿನಲ್ಲಿ ಇದೀಗ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೆಚ್ಚಿದೆ. ಮೂಲ್ಕಿ, ಕಿನ್ನಿಗೋಳಿಯ ಬಾರ್‌ಗಳಲ್ಲಿ ದೊಡ್ಡ ಟಿ.ವಿ.ಯನ್ನು ಅಳವಡಿಸಿದ್ದು ಮದ್ಯದೊಂದಿಗೆ ಕ್ರಿಕೆಟ್ ಸವಿಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಾರ್‌ನೊಂದಿಗೆ ಇರುವ ಕೊಠಡಿಗಳನ್ನು ಸಹ ಕೆಲವರು ಮುಂಚಿತಗಿ ಕಾಯ್ದಿರಿಸಿದ್ದಾರೆ. 

ಇಲ್ಲಿನ ಗಾಂಧಿ ಮೈದಾನ ಮತ್ತು ಸರ್ಕಾರಿ ಪದವಿ ಪೂರ್ವಕಾಲೇಜಿನ ಕ್ರೀಡಾಂಗಣದಲ್ಲಿಯೂ ಕ್ರಿಕೆಟ್ ಆಡುತ್ತಿರುವವರು ಬುಧವಾರದ ಪಂದ್ಯದ ಬಗ್ಗೆಯೇ ಮಾತುಕತೆ ನಡೆಸುತ್ತಿದ್ದರು.
ಕ್ರಿಕೆಟ್ ಅಭಿಮಾನಿಗಳು ಬೆಟ್ಟಿಂಗ್ ವ್ಯವಹಾರದಲ್ಲಿ ಸಾವಿರಾರು ರೂಪಾಯಿ ತೊಡಗಿಸಿದ್ದಾರೆ ಎಂದು ಮೂಲ್ಕಿ ಫ್ರೆಂಡ್ಸ್ ಕ್ಲಬ್ ಆಟಗಾರರೊಬ್ಬರು ತಿಳಿಸಿದರು. ಕೆಲವು ಉದ್ಯಮಿಗಳು ಬೆಟ್ಟಿಂಗ್ ವ್ಯವಹಾರದಲ್ಲಿ ಮಧ್ಯವರ್ತಿಗಳಾಗಿದ್ದು ಇಬ್ಬರ ಹಣವನ್ನು ಪಡೆದು ಯಾರು ಗೆಲ್ಲುವರೋ ಅವರಿಗೆ ಹಣ ತಲುಪಿಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಭಾರತದ ಪರವಾಗಿ ಹೆಚ್ಚು ಹಣ ಹೂಡಲಾಗಿದ್ದರೂ, ಪಾಕಿಸ್ತಾನದ ಮೇಲೂ ಕೆಲವರು ಹಣ ತೊಡಗಿಸಿರುವುದು ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.