ಉಡುಪಿ: ಎಂ.ಜಿ.ಎಂ ಕಾಲೇಜು ಬಳಿಯಿಂದ ಕಡಿಯಾಳಿವರೆಗೆ ನಿತ್ಯ ಅಪಘಾತಗಳು ಹೆಚ್ಚುತ್ತಿದ್ದು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ  ವೇಗ ನಿಯಂತ್ರಕ ಅಳವಡಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳದ ಸಂಚಾಲಕರು ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ.
ಇಲ್ಲಿ ಆಗಾಗ್ಗೆ ಅಪಘಾತ ಸಂಭವಿಸುತ್ತಿರುವುದರಿಂದಾಗಿ ಜನಸಾಮಾನ್ಯರು ರಸ್ತೆಗಿಳಿಯಲು ಹೆದರುತ್ತಿದ್ದಾರೆ. 
ವಾಹನಗಳು ಶರವೇಗದಲ್ಲಿ ಧಾವಿಸುತ್ತಿದ್ದು ಅವುಗಳ ವೇಗ ನಿಯಂತ್ರಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಮನವಿಯಲ್ಲಿ ವಿಶ್ವ ಹಿಂದೂ ಪರಿಷತ್‌ನ ನಗರ ಘಟಕದ ಅಧ್ಯಕ್ಷ ಬಾಬುರಾವ್ ಆಚಾರ್, ಬಜರಂಗ ದಳದ ಸಂಚಾಲಕ ಹರೀಶ್ ಬೆಳ್ಳಂಪಳ್ಳಿ, ಸಹ ಸಂಚಾಲಕ ಮಧು ಕಡಿಯಾಳಿ ಆಗ್ರಹಿಸಿದ್ದಾರೆ.
ರಸ್ತೆ ಹೊಂಡ ಮುಚ್ಚಲು ಆಗ್ರಹ: ಕೆಲ ತಿಂಗಳಿನ ಹಿಂದಷ್ಟೇ ಡಾಂಬರೀಕರಣಗೊಂಡಿರುವ ಕಲ್ಸಂಕ ಗುಂಡಿಬೈಲ್ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ಇಲ್ಲಿ ದಿನವೂ ಅನಾಹುತವುಂಟಾಗುತ್ತಿದೆ. ಈ ರಸ್ತೆ ಬಳಸುತ್ತಿರುವ  ಗುಂಡಿಬೈಲು, ತಾಂಗದಗಡಿ, ದೊಡ್ಡಣಗುಡ್ಡೆ, ಪೆರಂಪಳ್ಳಿ ನಿವಾಸಿಗಳು  ತೊಂದರೆ ಅನುಭವಿಸುತ್ತಿದ್ದಾರೆ.
 
ಈ ರಸ್ತೆಯಲ್ಲಿ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ದಿನನಿತ್ಯ  ಕೆಲಸಕ್ಕೆ ಹೋಗುವವರಿಗೂ ಸಂಚಾರ ಕಷ್ಟಕರವಾಗಿದೆ. ಹೀಗಾಗಿ ಕೂಡಲೇ ಸರಿಪಡಿಸಬೇಕು ಎಂದು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಜನಾರ್ದನ ಭಂಡಾರ್ಕರ್ ಆಗ್ರಹಿಸಿದ್ದಾರೆ.
ರಸ್ತೆಯ ಇಕ್ಕೆಲಗಳಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತವಾದ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.