ADVERTISEMENT

ವೇತನ ಪರಿಷ್ಕರಣೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 10:11 IST
Last Updated 19 ಡಿಸೆಂಬರ್ 2013, 10:11 IST

ಉಡುಪಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘವು ದೇಶದಾದ್ಯಂತ ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಬೆಂಬಲಿಸಿ ಉಡುಪಿ ಜಿಲ್ಲಾ ಯನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್‌ ಸಂಘಟನೆಯ ನೇತೃತ್ವದಲ್ಲಿ ವಿವಿಧ ಬ್ಯಾಂಕ್‌ಗಳ ಸಂಘಟನೆಗಳ ಸದಸ್ಯರು ನಗರದ ಸಿಂಡಿಕೇಟ್‌ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಡಿಸೆಂಬರ್‌ 2012ರಿಂದಲೇ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆ ಆಗಬೇ­ಕಿತ್ತು. ಆದರೆ ವಿಳಂಬ ನೀತಿಯಿಂದಾಗಿ ಈ ವರೆಗೆ ಪರಿಷ್ಕರಣೆ ಮಾಡಿಲ್ಲ. ಈ ಬಗ್ಗೆ ಬ್ಯಾಂಕ್‌ ಅಸೋಸಿಯೇಶನ್‌ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾ­ಕಾರರು ಹೇಳಿದರು.

ಬ್ಯಾಂಕ್‌ಗಳಲ್ಲಿ ಕೆಲಸದ ಒತ್ತಡ ಹೆಚ್ಚಾ­ಗಿದ್ದು ನೌಕರರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೆ ಅಗತ್ಯ ವಸ್ತುಗಳ ಬೆಲೆ ಗನಕ್ಕೇರಿರುವು­ದರಿಂದ ಜೀವನ ನಿರ್ವಹಣೆ ಕಷ್ಟಕರ­ವಾ­ಗಿದೆ. ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌­ಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಜನ ವಿರೋಧಿ ಎನಿಸುವ ರೀತಿಯಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಬದಲಾವಣೆ ತರಲು ಮುಂದಾಗಿದೆ. ಸರ್ಕಾರ ಈ ನೀತಿಯನ್ನು ಈ ಕೂಡಲೇ ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಸರ್ಕಾರ ಈ ಕೂಡಲೇ ನೌಕರರ ಬೇಡಿಕೆಗಳನ್ನು ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದರು.

ಬ್ಯಾಂಕ್‌ ಅಧಿಕಾರಿಗಳ ಸಂಘಟನೆಯ ದಿನಕರ ಪೂಂಜ, ಜಯಪ್ರಕಾಶ್‌, ಕೆ.ಕೆ. ಕಿಣಿ, ನೌಕರರ ಸಂಘಟನೆಯ ರಾಮ ಮೋಹನ್‌, ಹೆರಾಲ್ಡ್‌ ಡಿಸೋಜ, ಕೆ.­ಎಸ್‌. ಬಲ್ಲಾಳ್‌, ಚಂದ್ರಶೇಖರ್‌, ಬಾಲ­ಗಂಗಾಧರ, ರತ್ನಾಕರ ದೇವಾಡಿಗ, ಕೆ.­ಆರ್‌.­ಶೆಣೈ, ಆಲ್‌ ಇಂಡಿಯಾ ವಿಜಯಾ ಬ್ಯಾಂಕ್‌ ಆಫೀಸರ್ಸ್‌ ಅಸೋ­ಸಿ­ಯೇ­ಶನ್‌, ವಿಜಯಾ ಎಂಪ್ಲಾಯ್ಸ್‌ ಅಸೋಸಿ­ಯೇಶನ್‌, ಸಿಂಡಿಕೇಟ್‌ ಬ್ಯಾಂಕ್‌ ಪೆನ್ಷ­ನರ್ಸ್‌ ಅಂಡ್‌ ರಿಟೈರೀಸ್‌ ಅಸೋಸಿ­ಯೇಶನ್‌ ಸಂಘಟನೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.