ADVERTISEMENT

ವೇದವಿದ್ಯೆ ಸಮರ್ಥ ಬಳಕೆ ಆಗಲಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 11:25 IST
Last Updated 25 ಜನವರಿ 2011, 11:25 IST

ಉಡುಪಿ: ಜ್ಞಾನಮೂಲವೆಂದು ಹೇಳುವ ವೇದವಿದ್ಯೆಯ ದೊಡ್ಡ ನಿಧಿಯೇ ನಮಗೆ ಲಭ್ಯವಿದ್ದರೂ ಕೂಡ ಅದನ್ನು ಅರ್ಥಮಾಡಿಕೊಂಡು ಸಮರ್ಥವಾಗಿ ಬಳಸುವ ಕಾರ್ಯ ನಡೆಯದೇ ಪರಿತಪಿಸುವಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಇಲ್ಲಿ ಹೇಳಿದರು.

ಪುತ್ತಿಗೆ ಮಠದ ವಾದಿರಾಜ ಸಂಶೋಧನ ಕೇಂದ್ರ, ಸುರತ್ಕಲ್‌ನ ಫೌಂಡೇಷನ್ ಫಾರ್ ಇಂಡಿಯನ್ ಸೈಂಟಿಫಿಕ್ ಹೆರಿಟೇಜ್ ಸಹಯೋಗದಲ್ಲಿ ಅಂಬಲಪಾಡಿಯಲ್ಲಿ ಭಾನುವಾರ ನಡೆದ ಮೂರು ದಿನಗಳ ವೇದಗಳ ರಹಸ್ಯ ಅನ್ವೇಷಣೆ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವೇದಗಳಲ್ಲಿ ಎಲ್ಲವೂ ಅಡಗಿದೆ. ಜ್ಞಾನಮೂಲವಾದ ವೇದದ ಸಾರವನ್ನು ಅರಿಯುವ ಕೆಲಸ ನಡೆಯಬೇಕು. ಅದರಲ್ಲಿನ ಜ್ಞಾನ ಶೋಧಿಸಿ ಅದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ನಮ್ಮ ರಾಷ್ಟ್ರ ಇನ್ನಷ್ಟು ಮುಂದುವರಿಯುವಂತಾಗಬೇಕು ಎಂದರು.

ಮಂತ್ರಾಲಯದ ಗುರುಸಾರ್ವಭೌಮ ವಿದ್ಯಾಪೀಠದ ಕುಲಪತಿ ಡಾ.ವಿ.ಆರ್.ಪಂಚಮುಖಿ ಮಾತನಾಡಿ, ವೇದಗಳನ್ನು ಆದ್ಯತೆ ಮೇರೆಗೆ ಅಧ್ಯಯನ ಮಾಡುವ ಆಸಕ್ತರನ್ನು ಒಂದೆಡೆ ಸೇರಿಸಿ ಒಕ್ಕೂಟ ರಚಿಸಿಕೊಂಡು ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಸಮಾಜಮುಖಿಯಾಗಿಸುವ ಪ್ರಯತ್ನ ನಡೆಯಲಿ ಎಂದರು.

ಸಮ್ಮೇಳನದ ರೂವಾರಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಮಾತನಾಡಿ, ವಿಶ್ವಶಾಂತಿಗಾಗಿ ವೇದವಿದ್ಯೆಯ ಅಧ್ಯಯನ ನಡೆಯಬೇಕು ಎಂದರು. ಅಲ್ಲದೇ ವೇದಾಧ್ಯಯನ ವಿದ್ವಾಂಸರ ವೆಬ್‌ಸೈಟ್ ರೂಪಿಸುವ ಭರವಸೆ ನೀಡಿದರು. ಹೈದರಾಬಾದ್ ವಿದ್ವಾಂಸ ಪ್ರೊ.ಕೆ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ನವದೆಹಲಿಯ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ರಿಜಿಸ್ಟ್ರಾರ್ ಡಾ.ರಾಮಾನುಜ ದೇವನಾಥನ್, ಭೀಮನ ಕಟ್ಟೆ ಮಠದ ರಘುಮಾನ್ಯ ತೀರ್ಥರು, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ ಬಲ್ಲಾಳ್, ಮುಂಬೈ ಧರ್ಮ ಪ್ರತಿಷ್ಠಾನ ಅಧ್ಯಕ್ಷ ಸುಧೀರ್ ಶೆಟ್ಟಿ, ಸಮ್ಮೇಳನ ಸಮನ್ವಯಕಾರ ಡಾ.ಎಂ.ಎನ್.ವೆಂಕಟೇಶ್, ಗೋಪಾಲಾಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.