ADVERTISEMENT

ವ್ಯಸನ ಮುಕ್ತರಿಗೆ ಆತ್ಮವಿಶ್ವಾಸ ತುಂಬಿ

ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಸಲಹೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 6:16 IST
Last Updated 12 ಜೂನ್ 2018, 6:16 IST

ಉಡುಪಿ: ಮದ್ಯ ಮತ್ತು ಮಾದಕ ವಸ್ತುಗಳಿಂದ ವಿಮುಕ್ತರಾದವರಿಗೆ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಗಿಂತ ಮುಖ್ಯವಾಗಿ ಕುಟುಂಬದ ಸದಸ್ಯರ ಪ್ರೋತ್ಸಾಹ ಅಗತ್ಯ. ಇದು ಕೂಡ ಚಿಕಿತ್ಸೆಯ ಪ್ರಮುಖ ಭಾಗ ಎಂದು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ವಿರೂ
ಪಾಕ್ಷ ದೇವರಮನೆ ತಿಳಿಸಿದರು.

‘ಆಲ್ಕೊಹಾಲಿಕ್ ಅನಾನಿಮಸ್ ಬಾಂಧವ್ಯದ ಸ್ಥಾಪಕರ ದಿನಾಚರಣೆಯ ಅಂಗವಾಗಿ ಜಗನ್ನಾಥ ಭವನದಲ್ಲಿ ಈಚೆಗೆ ಆಯೋಜಿಸಿದ್ದ ‘ಮದ್ಯಪಾನ ಮುಕ್ತ ಹಾಗೂ ಮದ್ಯರಹಿತ ಜೀವನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮದ್ಯವ್ಯಸನ ಮುಕ್ತರಿಗೆ ಬದುಕುವ ಆತ್ಮವಿಶ್ವಾಸ ತುಂಬಿದರೆ, ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ. ಅಪಹಾಸ್ಯ, ದೂಷಣೆಗಳಿಂದ ಮತ್ತೆ ವ್ಯಸನದತ್ತ ಮುಖಮಾಡುವ ಆತಂಕವಿರುತ್ತದೆ. ಅವರ ಹೊಸ ಬದುಕಿನಲ್ಲಿ ಬೆಳಕು ಮೂಡುವಂತಹ ವಾತಾವರಣವನ್ನು ನಿರ್ಮಾಣ ಮಾಡಿ ಬದುಕುವ ಅಭಿಲಾಷೆಯನ್ನು ಹೆಚ್ಚಿಸಬೇಕು ಎಂದು ಕರೆ ನೀಡಿದರು.

ADVERTISEMENT

ಮದ್ಯಸೇವನೆಯಿಂದ ಶರೀರದ ಶಕ್ತಿ ಕ್ಷೀಣಿಸುತ್ತದೆ. ದೈಹಿಕ ಆರೋಗ್ಯದ ಜೆತೆಗೆ ಮಾನಸಿಕ ಆರೋಗ್ಯವೂ ಕೆಡುತ್ತದೆ. ವರ್ತನೆಯಲ್ಲಿ ಬದಲಾ
ವಣೆ ಕಂಡುಬಂದು ಹಿಂಸಾತ್ಮಕ ಚಟುವಟಿಕೆಗಳಲ್ಲಿಯೂ ತೊಡಗಬಹುದು. ಹೆಚ್ಚು ಮದ್ಯ ಸೇವನೆ ಮಾಡುವುದರಿಂದ ನರ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ, ದೃಢ ಮನಸ್ಸು ಮಾಡಿ ಕುಡಿತದಿಂದ ಹೊರಬಂದು ಸ್ವಉದ್ಯೋ
ಗದೊಂದಿಗೆ ಸ್ವಾವಲಂಬಿ ಜೀವನ ನಡೆಸ ಬೇಕು ಎಂದು ಕಿವಿಮಾತು ಹೇಳಿದರು.

ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಮಾನಸಿಕ ಸಮಾಲೋಚಕ ನಾಗರಾಜ್ ಉಪಸ್ಥಿತರಿದ್ದರು. ಜನಾರ್ದನ್ ನಾಯಕ್ ಮಣಿಪಾಲ ಕಾರ್ಯಕ್ರಮ ಸಂಯೋಜಿಸಿ, ನಿರೂಪಿಸಿದರು.

ವ್ಯಸನದಿಂದ ಜೀವನ ಹಾಳು

ಮದ್ಯ ವ್ಯಸನದಿಂದ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದ ನಿದರ್ಶನಗಳಿವೆ. ಅಲ್ಪಸುಖಕ್ಕಾಗಿ ಚಟಕ್ಕೆ ಬಲಿಯಾದರೆ ಜೀವನವಷ್ಟೇ ಹಾಳಾಗುವುದಿಲ್ಲ, ಆತನ ಸಂಸಾರವೇ ಬೀದಿ ಪಾಲಾಗುತ್ತದೆ. ಹೆಂಡತಿ ಮಕ್ಕಳು ಕಣ್ಣೀರಿನಲ್ಲಿ ಕೈತೊಳೆಯಬೇಕಾಗುತ್ತದೆ. ಕುಡಿತದ ಚಟದಿಂದ ಸಮಾಜದಲ್ಲಿ ಗೌರವ ಕಳೆದುಕೊಳ್ಳಬೇಕಾಗುತ್ತದೆ. ಸಮಾಜದ ನಂಬಿಕೆ ಹಾಳಾಗಿ, ಆತ್ಮವಿಶ್ವಾಸ ಕುಗ್ಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ವಿಶು ಕುಮಾರ್‌ ಹೇಳಿದರು.

ಮಕ್ಕಳಿಗೆ ವಿದ್ಯೆಯ ಜತೆಗೆ ಧಾರ್ಮಿಕ ಆಚರಣೆ, ಸಾಮಾಜಿಕ ಚಿಂತನೆ ಹಾಗೂ ಜೀವನದ ಮೌಲ್ಯಗಳ ಶಿಕ್ಷಣ ನೀಡುವುದು ಅಗತ್ಯ
- ಜಯಕರ್‌ ಶೆಟ್ಟಿ ಇಂದ್ರಾಳಿ, ಆಡಳಿತ ನಿರ್ದೇಶಕ ಬಡಗಬೆಟ್ಟು ಕೋ ಆಪರೇಟಿವ್ ಬ್ಯಾಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.