ADVERTISEMENT

ಶಿರ್ವ: ಚೆಲುವ ಕನ್ನಡ ನಾಡು ಉತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 9:21 IST
Last Updated 7 ಡಿಸೆಂಬರ್ 2012, 9:21 IST

ಶಿರ್ವ: ಸಂತ ಮೇರಿ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಶಿರ್ವ ಸಂತಮೇರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ `ಚೆಲುವ ಕನ್ನಡ ನಾಡು' ಉತ್ಸವ ಇದೇ 8ರಂದು ನಡೆಯಲಿದೆ.

ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಎಂ.ಮೋಹನ ಆಳ್ವ ಉತ್ಸವವನ್ನು ಉದ್ಘಾಟಿಸಲಿದ್ದು, ಶಿರ್ವ ಚರ್ಚ್‌ನ ಧರ್ಮಗುರು ಫಾದರ್ ಸ್ಟೇನಿ ತಾವ್ರೊ ಅಧ್ಯಕ್ಷತೆ ವಹಿಸುವರು.  ಪ್ರಧಾನ ಅತಿಥಿಯಾಗಿ ಮೈಸೂರು ಸೇಂಟ್ ಫಿಲೊಮಿನಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರೊ.ಕೃಷ್ಣೇಗೌಡ ಭಾಗವಹಿಸುವರು.

ಬೆಳಿಗ್ಗೆ 11ಗಂಟೆಗೆ ನಡೆಯುವ ವಿಚಾರಗೋಷ್ಠಿಯಲ್ಲಿ  ದೇಶ ವಿದೇಶಗಳ ಮಟ್ಟದಲ್ಲಿ ಕನ್ನಡ ಹಿರಿಮೆಗಳ ಅವಲೋಕನ ಕುರಿತು ಖ್ಯಾತ ವಿಮರ್ಶಕಿ ಚಂದ್ರಕಲಾ ನಂದಾವರ ಮಾತನಾಡುವರು. 12.15ಕ್ಕೆ ಭಾವಗೀತೆಗಳ ಗಾಯನ ಮತ್ತು ಚಿತ್ರಣ  ಭಾವ ಕುಂಚ  ಕಾರ್ಯಕ್ರಮದಲ್ಲಿ ನಾದಲೀಲೆ ಉಡುಪಿ-ರಮೇಶ್ ಬಂಟಕಲ್ಲು ಭಾಗವಹಿಸುವರು.

ಮಧ್ಯಾಹ್ನ 2.30ಕ್ಕೆ ನಡೆಯುವ ವಿದ್ಯಾರ್ಥಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕಿಟಾಳ್ ಡಾಟ್ ಕಾಮ್ ಸಂಪಾದಕ ಎಚ್ಚಮ್ ಪೆರ್ನಾಲ್  ವಹಿಸುವರು. ಸಂಜೆ 4ಕ್ಕೆ ಮುಕ್ತ ಸಂವಾದ, 5ಕ್ಕೆ  ಜರುಗುವ ಸಮಾರೋಪ ಸಮಾರಂಭದಲ್ಲಿ  ಪ್ರೊ.ಕೃಷ್ಣೇಗೌಡ ಪ್ರಧಾನ ಭಾಷಣ ಮಾಡಲಿದ್ದು, ರೆ.ಫಾ. ಸ್ಟೇನಿ ತಾವ್ರೊ ಅಧ್ಯಕ್ಷತೆ ವಹಿಸುವರು.

ಸಂಜೆ 6.45ಕ್ಕೆ ಕೆ.ಎಸ್.ಶ್ರೀಧರಮೂರ್ತಿ ಪರಿಕಲ್ಪನೆಯಲ್ಲಿ ಚೆಲುವ ಕನ್ನಡ ನಾಡು `ಧ್ವನಿ ಬೆಳಕು' ಸಂಗೀತ ನರ್ತನಗಳ ಸಂಯೋಜಿತ ಅಪೂರ್ವ ಕಾರ್ಯಕ್ರಮವನ್ನು  ನೃತ್ಯನಿಕೇತನ ಕೊಡವೂರು  ಇವರು ಪ್ರಸ್ತುತ ಪಡಿಸಲಿರುವರು ಸೀತಾ ಬುಕ್ ಹೌಸ್ ಸೆಂಟರ್ ವತಿಯಿಂದ ಕನ್ನಡ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ, ನಾಡಿನ ಹೆಸರಾಂತ ಸಾಧಕರ ಮುದ್ರಿತ ಚಿತ್ರಗಳ ಪ್ರದರ್ಶನ  ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆ: ಚೆಲುವ ಕನ್ನಡ ನಾಡು ಸಾಂಸ್ಕೃತಿಕ ಕನ್ನಡ ಉತ್ಸವ ಕಾರ್ಯಕ್ರವದಲ್ಲಿ ದಿನಪೂರ್ತಿ ಭಾಗವಹಿಸುವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಫ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆಯನ್ನು ಶಿಕ್ಷಣ ಇಲಾಖೆ ನೀಡಿದೆ  ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೈಮನ್ ಡಿಸೋಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.