ಉಪ್ಪುಂದ (ಬೈಂದೂರು):ಬುಧವಾರದ ಶಿವರಾತ್ರಿಯನ್ನು ಜನರು ‘ಅವರವರ ಭಾವಕ್ಕೆ, ಅವರವರ ಭಕ್ತಿಗೆ’ ತಕ್ಕಂತೆ ವಿಭಿನ್ನವಾಗಿ ಆಚರಿಸಿದರು. ಅವರ ಭಕ್ತಿ ಅಭಿವ್ಯಕ್ತಿಗೊಂಡುದು ಶಿವ ಸನ್ನಿಧಿಗೆ ಭೇಟಿ, ಶಿವಾರಾಧನೆ, ಶಿವಾರ್ಚನೆ, ಉಪವಾಸ, ಭಜನೆ, ಜಾಗರಣೆ ಇತ್ಯಾದಿ ನಾನಾಪ್ರಕಾರಗಳ ಮೂಲಕ. ಆದರೆ ಉಪ್ಪುಂದದ ಕಲಾವಿದರ ವೇದಿಕೆ ‘ನಮ್ಮ ಚಿತ್ತಾರ’ ತಮಗೊಪ್ಪುವ ಸಹಜ ಶೈಲಿಯಲ್ಲಿ, ತಮ್ಮ ಅಭಿವ್ಯಕ್ತಿಯ ಮಾಧ್ಯಮದ ಮೂಲಕ ಶಿವರಾತ್ರಿ ಆಚರಣೆಗೆ ಕಲೆಯ ಮೆರುಗು ನೀಡಿದರು. ಭಕ್ತಿಭಾವಕ್ಕೆ ಹೊಸ ಆಯಾಮ ಒದಗಿಸಿದರು.
ಅದಕ್ಕೆ ಅವರು ಆರಿಸಿಕೊಂಡ ಸ್ಥಳ ಶಿವಾರಾಧನೆಗೆ ಖ್ಯಾತಿವೆತ್ತ ಇಲ್ಲಿಗೆ ಸಮೀಪದ ಮಡಿಕಲ್ ಕಡಲತೀರವನ್ನು. ಅಲ್ಲಿ ಮೀನುಗಾರರು ವಿಶಿಷ್ಟವಾಗಿ ನಿರ್ಮಿಸಿಕೊಂಡ ಶಿವರಾಧನಾ ಕೇಂದ್ರ ಅರಮಕೋಡಿ ಮಹಾ ಈಶ್ವರ ದೇವಾಲಯವಿದೆ. ಶಿವರಾತ್ರಿಯಂದು ಅಲ್ಲಿಗೆ ಜನಪ್ರವಾಹ ಹರಿದು ಬರುತ್ತದೆ. ‘ನಮ್ಮ ಚಿತ್ತಾರ’ ಕಲಾವಿದರು ಬುಧವಾರ ಬೆಳಿಗ್ಗೆಯೇ ಅಲ್ಲಿಗಾಗಮಿಸಿದರು. ಕಡಲತೀರದ ಪ್ರಶಸ್ತ ಸ್ಥಳ ಆಯ್ದರು. ಅಗತ್ಯವಿರುವಷ್ಟು ಮರಳಿಗೆ ನೀರು ಚಿಮುಕಿಸಿ ಹದಗೊಳಿಸಿದರು. ಆ ಬಳಿಕ ಒಬ್ಬರಿಗೊಬ್ಬರು ಕೈಜೋಡಿಸಿ ಮರಳಿನಲ್ಲಿ ಶಿವಶಿಲ್ಪ ನಿರ್ಮಾಣಕ್ಕೆ ಚಾಲನೆ ನೀಡಿದರು. ಎಲ್ಲರ ಸಾಮೂಹಿಕ ಶ್ರಮ, ಕಲಾ ಕಲ್ಪನೆಯ ಫಲವಾಗಿ ಮಧ್ಯಾಹ್ನದ ಹೊತ್ತಿಗೆ ಅಲ್ಲಿ ನಿರ್ಮಾಣವಾಯಿತು 15 ಅಡಿ ಎತ್ತರದ ಚಿತ್ತಾಕರ್ಷಕ ಬೃಹತ್ ಶಿವನ ಮೂರ್ತಿ. ಸರ್ಪದಿಂದ ಸುತ್ತುವರಿಯಲ್ಪಟ್ಟಕೈಲಾಸಬೆಟ್ಟದ ಮೇಲೆ ವ್ಯಾಘ್ರಚರ್ಮಾಸನದಲ್ಲಿ ಪದ್ಮಾಸನ ಬಲಿದು, ಅರ್ಧ ನಿಮೀಲಿತ ನೇತ್ರನಾಗಿ ಪೂರ್ವಾಭಿಮುಖವಾಗಿ ಧ್ಯಾನಮುದ್ರೆಯಲ್ಲಿ ಕುಳಿತ ಈ ಶಿವಶಿಲ್ಪದ ಹಿಂದಿನ ನೀಲಾಕಾಶ ಮತ್ತು ಸಮುದ್ರ ಅದಕ್ಕೆ ಗಂಭೀರ ಹಿನ್ನೆಲೆ ಒದಗಿಸಿತ್ತು.
ಈ ಕಾರ್ಯದಲ್ಲಿ ’ನಮ್ಮ ಚಿತ್ತಾರ’ದ ಅಧ್ಯಕ್ಷ ಸತ್ಯನಾ ಕೊಡೇರಿ ಮತ್ತು ನಾರಾಯಣ ರಾಜು ಅವರ ಜತೆಯಾದ ಸಹಕಲಾವಿದರೆಂದರೆ ದೀಟಿ ಸೀತಾರಾಮ ಮಯ್ಯ, ತ್ರಿವಿಕ್ರಮ ರಾವ್, ನರಸಿಂಹ ಆರ್, ಯು. ಮಂಜುನಾಥ ಮಯ್ಯ, ಎನ್.ವಿ.ಪ್ರಭು, ಯು. ರಾಜಾರಾಮ ಭಟ್, ಮಹಾಬಲ ಕೆ, ಆನಂದ ಜಿ, ನಾಗರಾಜ ಪಿ. ಯಡ್ತರೆ, ಸುಬ್ರಹ್ಮಣ್ಯ ಗಾಣಿಗ, ಸುಧಾಕರ ದೇವಾಡಿಗ, ಕ್ಲಾರೆನ್ಸ್ ಫರ್ನಾಂಡಿಸ್, ಸುರೇಶ ಹುದಾರ್, ಜಯರಾಜ್ ಮತ್ತು ಚೇತರ್ಷ. ನಿರ್ಮಾಣ ಸಮಯದಲ್ಲಿ ಮತ್ತು ಆ ಬಳಿಕ ಹೊತ್ತು ಮುಳುಗಿ ಕತ್ತಲಾವರಿಸುವವರೆಗೂ ಜನ ಅಗಮಿಸಿ ಸುಂದರ ಮರಳು ಶಿಲ್ಪವನ್ನು ಕಣ್ತುಂಬ ನೋಡಿದರು; ಆನಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.