ADVERTISEMENT

ಸಂಸ್ಕಾರ, ಸಂಸ್ಕೃತಿಯಿಂದ ಭ್ರಷ್ಟಾಚಾರ ನಿರ್ಮೂಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2011, 7:20 IST
Last Updated 12 ಏಪ್ರಿಲ್ 2011, 7:20 IST

ಬಾಳೇಕುದ್ರು (ಬ್ರಹ್ಮಾವರ): ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ನಿರ್ಮೂಲನೆಗೆ ಪ್ರತಿಯೊಬ್ಬರಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಯಬೇಕು. ಮಹಿಳೆಯರ ಮೂಲಕ ಈ ಕಾರ್ಯಕ್ಕೆ ಚಾಲನೆ ದೊರೆತಲ್ಲಿ ಇದು ಸಾಧ್ಯ ಎಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.

ಹಂಗಾರಕಟ್ಟೆ ಬಾಳೇಕುದ್ರು ಶ್ರೀ ಮಠದಲ್ಲಿ ಸೋಮವಾರ ನೃಸಿಂಹಾಶ್ರಮ ಸ್ವಾಮೀಜಿ ಅವರ 5ನೇ ವರ್ಧಂತ್ಯುತ್ಸವ ಅಂಗವಾಗಿ ಆರಂಭಗೊಂಡ ಚತುಃಸಂಹಿತಾ ಯಾಗದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಯಜ್ಞ, ಯಾಗಾದಿಗಳು ನಡೆಯುತ್ತಿರುವುದರಿಂದ ಮನೆ ಮನಸ್ಸಿಗೆ ನೆಮ್ಮದಿ ಸಿಗುತ್ತಿದೆ. ಮಠ ಮಂದಿರಗಳಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ಚಿಂತನೆಯಿಂದ ಸಂಸ್ಕಾರ, ಸಂಸ್ಕೃತಿ ಇನ್ನೂ ಉಳಿದಿದೆ ಎಂದರು.

ಮಲ್ಪೆ ಉದ್ಯಮಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಔಷಧಿ ರಹಿತ ಚಿಕಿತ್ಸೆ ಎಂದರೆ ಧಾರ್ಮಿಕ ಕೇಂದ್ರಗಳು ಎಂದರು.
ಶ್ರೀಮಠದ ನೃಸಿಂಹಾಶ್ರಮ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಬ್ರಹ್ಮಾವರ ಉದ್ಯಮಿ ಭಾಸ್ಕರ ರೈ, ಐರೋಡಿ ದುರ್ಗಾಪರಮೇಶ್ವರೀ ದೇವಸ್ಥಾನ ಆಡಳಿತ ಮೊಕ್ತೇಸರ ಕೃಷ್ಣಪ್ಪ ಬೆನ್ನು, ಮಠದ ವಿಕ್ರಂ ಬಾಳಿಗಾ, ಅಧ್ಯಾಪಕ ಶ್ರೀಕಾಂತ್ ಸಾಮಂತ್ ಇದ್ದರು. ಈ ಸಂದರ್ಭ ಕದಳಿ ರಮಾನಂದ ಮಧ್ಯಸ್ಥ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.