ADVERTISEMENT

ಸಮಗ್ರ ಕೃಷಿಗೆ ಆತ್ಮವಿಶ್ವಾಸ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 10:00 IST
Last Updated 18 ಅಕ್ಟೋಬರ್ 2011, 10:00 IST

ಬ್ರಹ್ಮಾವರ: `ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬೇಕಾದರೆ ಸಮಗ್ರಕೃಷಿ ಮಾಡಬೇಕು. ಅದಕ್ಕೆ ಆತ್ಮವಿಶ್ವಾಸ, ಆಸಕ್ತಿ ಇರಬೇಕು~ ಎಂದು ಬೈಂದೂರು ಹಳ್ಳಿಹೊಸೂರಿನ ಪ್ರಗತಿಪರ ಕೃಷಿಕ ತಿಮ್ಮಣ್ಣ ಹೆಗ್ಡೆ ಸಲಹೆ ನೀಡಿದರು.

ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ಜಲಾನಯನ ಅಭಿವೃದ್ಧಿ ಇಲಾಖೆ, ಪಶುಸಂಗೋಪನೆ, ಅರಣ್ಯ, ರೇಷ್ಮೆ, ಮೀನುಗಾರಿಕೆ ಇಲಾಖೆ, ಉಡುಪಿ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಂಗಳೂರು ಉಡುಪಿ ಜಿಲ್ಲಾ ಕೃಷಿಕ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಕೃಷಿ ಮೇಳದಲ್ಲಿ ಸೋಮವಾರ ಬತ್ತ ಆಧಾರಿತ ಸಮಗ್ರ ಕೃಷಿ ಪದ್ಧತಿಗಳು ಮತ್ತು ಯಾಂತ್ರೀಕರಣದ ಅವಕಾಶಗಳ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

`ಎರೆಹುಳ ಗೊಬ್ಬರ, ಗೋಬರ್‌ಗ್ಯಾಸ್, ಜೀವಾಮೃತದಂತಹ ಸಾವಯವ ಗೊಬ್ಬರಗಳು, ಅಗತ್ಯಕ್ಕೆ ತಕ್ಕಂತೆ ರಸಗೊಬ್ಬರಗಳು ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡಲ್ಲಿ ಕೃಷಿಯಲ್ಲಿ ಲಾಭ ಪಡೆಯಬಹುದು ರಾಜ್ಯದಲ್ಲಿ ಯಾಂತ್ರೀಕರಣದ ಬಿಡಿ ಭಾಗಗಳು ದೊರೆಯದೇ ಇರುವುದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಗಮನ ಹರಿಸಬೇಕಾಗಿದೆ~ ಎಂದರು.

`ರೈತರಲ್ಲಿ ಉದಾಸೀನತೆಯ ಕಾರಣ ಕರಾವಳಿಯಲ್ಲಿ ಕೃಷಿ ಹಿನ್ನಡೆ ಕಂಡಿದೆ. ಕೃಷಿಯಲ್ಲಿ ಲಾಭ ಇಲ್ಲ ಎಂಬುದು ಸುಳ್ಳು. ಸ್ವಂತ ದುಡಿಮೆಯಿಂದ ಕೃಷಿಯಲ್ಲಿ ಲಾಭ ಪಡೆಯಬಹುದು~ ಎಂದರು.

`ಪಾಲಡ್ಕದ ಪ್ರಗತಿಪರ ಕೃಷಿಕ ಸೀತಾರಾಮ ಶೆಟ್ಟಿ ಮಾತನಾಡಿ ಬತ್ತ ಇನ್ನಿತರ ಕೃಷಿಯಲ್ಲಿ ಅಧಿಕ ಇಳುವರಿ ಪಡೆಯಲು ಜಮೀನು ಆಯ್ಕೆ, ಸರಿಯಾದ ಮಣ್ಣು ಪರೀಕ್ಷೆ, ಸಮಪ್ರಮಾಣದ ರಸಗೊಬ್ಬರಬಳಕೆ ಮಾಡಬೇಕು. ರೈತರಲ್ಲಿ ವ್ಯಾಪಾರಿ ಬುದ್ಧಿ ಇರಬೇಕು. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇದ್ದಾಗ ಕೃಷಿ ಉತ್ಪನ್ನಮಾರಾಟ ಮಾಡಬೇಕು~ ಎಂದರು.

ಬ್ರಹ್ಮಾವರ ವಲಯ ಕೃಷಿ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ಎಂ.ಹನುಮಂತಪ್ಪ, ಯೋಜನಾ ಸಂಯೋಜಕ ಡಾ.ಬಿ.ಧನಂಜಯ,  ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎಂ.ಟಿ.ಮಂಜುನಾಥ್, ಡಾ.ಕೆ.ಎಸ್ ಕಾಮತ್, ಬಾರ್ಕೂರು ಸೀತಾರಾಮ ಶೆಟ್ಟಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.