ADVERTISEMENT

ಸ್ಪಿಕ್‌ಮೆಕೆ ರಾಷ್ಟ್ರೀಯ ಸಮಾವೇಶ ಮೇ 28ರಿಂದ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 10:45 IST
Last Updated 20 ಫೆಬ್ರುವರಿ 2012, 10:45 IST

ಮಂಗಳೂರು: ಯುವಜನತೆಯಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಸ್ಥಾಪನೆಗೊಂಡ ಸೊಸೈಟಿಯ (ಸ್ಪಿಕ್‌ಮೆಕೆ) ಮಂಗಳೂರು ಘಟಕ ರಜತ ಮಹೋತ್ಸವ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮೆ 28ರಿಂದ ಜೂನ್ 3 ರವರೆಗೆ ಸುರತ್ಕಲ್‌ನ ಎನ್‌ಐಟಿಕೆ ಆವರಣದಲ್ಲಿ 27ನೇ ಸ್ಪಿಕ್‌ಮೆಕೆ ರಾಷ್ಟ್ರೀಯ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ದೇಶದಾದ್ಯಂತದ 1500ಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಕಿಸ್ತಾನದ 30 ವಿದ್ಯಾರ್ಥಿಗಳ ಸಹಿತ ಸುಮಾರು 70 ಮಂದಿ ವಿದೇಶಿ ವಿದ್ಯಾರ್ಥಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಯೋಗದಿಂದ ಆರಂಭಗೊಂಡು ಶಾಸ್ತ್ರೀಯ ಹಾಡು, ನೃತ್ಯಗಳೊಂದಿಗೆ ದಿನವಿಡೀ ಉಲ್ಲಸಿತರಾಗಲಿರುವ ವಿದ್ಯಾರ್ಥಿಗಳು ಒಂದು ವಾರ ಕಾಲ ಸಂಭ್ರಮದಿಂದ ಕಾಲ ಕಳೆಯುವ ಉತ್ಸವವಾಗಲಿದೆ ಎಂದು ಸ್ಪಿಕ್‌ಮೆಕೆಯ ಸಂಸ್ಥಾಪಕ ಅಧ್ಯಕ್ಷ ಕಿರಣ್ ಸೇಠ್ ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಯುವಜನತೆ ನಮ್ಮ ನಾಡಿನ ಕಲಾ ಪ್ರಕಾರವನ್ನು ಬಳಸಿಕೊಂಡು ತಮ್ಮ ಓದು, ಸಂಶೋಧನೆಯಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳುವುದಕ್ಕಾಗಿಯೇ ಸ್ಪಿಕ್‌ಮೆಕೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳತ್ತ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಈ ಕಾರ್ಯಕ್ರಮಗಳು ತಲುಪಬೇಕು ಎಂಬ ಗುರಿ ಇದೆ. ಹೀಗಾಗಿ 13ರಿಂದ 26 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡು ಈ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ರಾಷ್ಟ್ರೀಯ ಸಮಾವೇಶದಲ್ಲಿ ಪ್ರತಿ ರಾಜ್ಯದಿಂದ 60ರಿಂದ 70 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಈಗಾಗಲೇ ನೋಂದಣಿ ಕಾರ್ಯ ಆರಂಭವಾಗಿದೆ. www.­spicmacay.com ಅಥವಾwww.­spicmacay-karnataka.org Cಇಲ್ಲಿಂದ ನೋಂದಣಿ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಕರ್ನಾಟಕದ ಶಾಲಾ ಕಾಲೇಜುಗಳಿಗೆ ಅರ್ಜಿ ಸಲ್ಲಿಸಲು ಮಾರ್ಚ್ 20ರ ವರೆಗೆ ಕಾಲಾವಕಾಶ ಇದೆ ಎಂದು ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಎಸ್.ಜಿ.ಮಯ್ಯ ತಿಳಿಸಿದರು.

ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮತ್ತು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಆಗಮಿಸಲಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ 5 ಲಕ್ಷ ರೂಪಾಯಿಗಳ ನೆರವು ಪ್ರಕಟಿಸಿದೆ ಎಂದರು.

ಗಣ್ಯರ ಆಗಮನ: ಸ್ಪಿಕ್‌ಮೆಕೆ ರಾಷ್ಟ್ರೀಯ ಸಮಾವೇಶದಲ್ಲಿ ಖ್ಯಾತ ಕಲಾವಿದರಾದ ವಿದ್ವಾನ್ ಟಿ.ವಿ. ಶಂಕರನಾರಾಯಣನ್ (ಕರ್ನಾಟಕ ಸಂಗೀತ), ಬೇಗಂ ಪರ್ವೀನ್ ಸುಲ್ತಾನಾ (ಹಿಂದೂಸ್ತಾನಿ ಸಂಗೀತ), ಎನ್.ರಾಜಂ (ಹಿಂದೂಸ್ತಾನಿ ಪಿಟೀಲು), ವಿದ್ವಾನ್ ಚಿತ್ರವೀಣಾ ರವಿಕುಮಾರ್ (ಘಟವಾದ್ಯ), ಮೈಸೂರು

ನಾಗರಾಜ್ ಮತ್ತು ಮಂಜುನಾಥ್ (ಕರ್ನಾಟಕ ಪಿಟೀಲು), ಪಂಡಿತ್ ರಾಜನ್ ಮತ್ತು ಸಾಜನ್ ಮಿಶ್ರಾ (ಹಿಂದೂಸ್ತಾನಿ ಹಾಡುಗಾರಿಕೆ), ಪಂಡಿತ್ ವೆಂಕಟೇಶ್ ಕುಮಾರ್ (ಹಿಂದೂಸ್ತಾನಿ ಹಾಡುಗಾರಿಕೆ), ವಾಸಿಫುದ್ದೀನ್ ದಗಾರ್ (ಧ್ರುಪದ್), ವಿದುಷಿ ಮಾಲವಿಕಾ ಸಾರಕ್ಕಾಯ್ (ಭರತನಾಟ್ಯ), ಮರ್ಗಿ ಮಧು (ಕೂಡಿಯಾಟ್ಟಂ), ಮಾಧವಿ ಮುದ್ಗಲ್ (ಒಡಿಸ್ಸಿ) ಅವರು ಪಾಲ್ಗೊಳ್ಳುವುದು ಖಚಿತವಾಗಿದೆ. ದೇಶದಾದ್ಯಂತದಿಂದ ಆಗಮಿಸುವ 20 ಕುಶಲಕರ್ಮಿಗಳ ನೆರವಿನೊಂದಿಗೆ ಕರಕುಶಲ ಗ್ರಾಮ ನಿರ್ಮಿಸಲಾಗುವುದು.
 
ಕರ್ನಾಟಕದ ಜನಪದ ಕಲಾಪ್ರಕಾರಗಳಾದ ಯಕ್ಷಗಾನ, ಡೊಳ್ಳುಕುಣಿತ, ಕಂಸಾಲೆ, ಚಿತ್ತಾರ ಕಲೆ, ಲಂಬಾಣಿ ಕಲೆಯಂತಹ ವಿಚಾರಗಳಲ್ಲಿ ಕಲಾ ಕೌಶಲವನ್ನು ಬಿಂಬಿಸಲು ವಿಶೇಷ ಒತ್ತು ನೀಡಲಾಗುವುದು ಎಂದು ಎನ್‌ಐಟಿಕೆಯ ಪ್ರಭಾರ ನಿರ್ದೇಶಕ ಪ್ರೊ.ಉಮೇಶ್ ಅವರು ತಿಳಿಸಿದರು.

ಗುರುಕುಲ ಮಾದರಿಯ ವಾತಾವರಣದಲ್ಲಿ ನಿತ್ಯ ಈ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಮುಂಜಾನೆ 4ರಿಂದ ಯೋಗದ ಮೂಲಕ ಆರಂಭವಾಗುವ ದಿನಚರಿ ರಾತ್ರಿ 10ರವರೆಗೂ ಮುಂದುವರಿಯಲಿದೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಇದು ಮುಖ್ಯ ಪಾತ್ರ ವಹಿಸಲಿದೆ ಎಂದು ಸ್ಪಿಕ್‌ಮೆಕೆ ಬೆಂಗಳೂರು ಘಟಕದ ಸುಪ್ರಿತಾ ತಿಳಿಸಿದರು.
ಸಂಘಟನಾ ಸಮಿತಿಯ ಮಣಿಕಂಠನ್, ಧ್ರುವ್ ದೇಶ್‌ಮುಖ್ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.