ADVERTISEMENT

ಹಕ್ಕುಪತ್ರಕ್ಕೆ ನಿವೇಶನರಹಿತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:24 IST
Last Updated 15 ಡಿಸೆಂಬರ್ 2012, 10:24 IST
ಕುಂದಾಪುರದ ಪುರಸಭೆಗೆ ಶುಕ್ರವಾರ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ನಿವೇಶನರಹಿತರಿಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.
ಕುಂದಾಪುರದ ಪುರಸಭೆಗೆ ಶುಕ್ರವಾರ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು ನಿವೇಶನರಹಿತರಿಗೆ ನಿವೇಶನದ ಹಕ್ಕುಪತ್ರ ನೀಡುವಂತೆ ಆಗ್ರಹಿಸಿದರು.   

ಕುಂದಾಪುರ: ಇಲ್ಲಿನ ಪುರಸಭಾ ವ್ಯಾಪ್ತಿಯ ನಿವೇಶನ ರಹಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ್ಮಿಕರ ಸಂಘದ ತಾಲ್ಲೂಕು ಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಪುರಸಭೆ ವ್ಯಾಪ್ತಿಯ ಬಡನಿವೇಶನ ರಹಿತರಿಗೆ ನಿವೇಶನ ಹಂಚಲು ಹಾಗೂ ಹಕ್ಕು ಪತ್ರ ಮಂಜೂರು ಮಾಡುವಂತೆ ಆಗ್ರಹಿಸಿ ಪುರಸಭೆಯ ಎದುರು ಧರಣಿ ಮುಷ್ಕರ ನಡೆಸಲಾಯಿತು.

ಈ ಸಂದರ್ಭದಲ್ಲಿ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಸಂಘದ ನಿತ್ಯಾನಂದ ಸ್ವಾಮಿ, ಬಡ ಹಾಗೂ ಸಾಮಾನ್ಯ ಜನರ ಅಗತ್ಯ ಬೇಡಿಕೆಯ ಕುರಿತು ಸಿಪಿಎಂ ನಡೆಸುತ್ತಿರುವ ಹೋರಾಟ ಕೇವಲ ಚುನಾವಣಾ ಪ್ರೇರಿತವಾಗಿದೆ ಎಂದು ಪುರಸಭೆಯ ಆಡಳಿತಾರೂಢ ಸದಸ್ಯರ ಆರೋಪಿಸುತ್ತಿದ್ದಾರೆ. ಇದು ಖಂಡನೀಯ.

ರಾಜ್ಯದ ಅಧಿಕಾರರೂಡ ಬಿಜೆಪಿ ಸರ್ಕಾರ ವಿಶ್ವ ಹೂಡಿಕೆದಾರರ ಸಮಾವೇಶವನ್ನು ಎರೆಡರಡೂ ಬಾರಿ ನಡೆಸಿ, ವಿದೇಶಿ ಕಂಪೆನಿಗಳಿಗೆ ರಾಜ್ಯದ ರೈತರ ಸಾವಿರಾರು ಎಕರೆ ಭೂಮಿಯನ್ನು ನೀಡಲು ಸಂಚು ನಡೆಸಿದೆ. ಸರ್ಕಾರದ ಈ ತೀರ್ಮಾನದಿಂದ ಸಾವಿರಾರು ಬಡ ರೈತರು ಭೂಮಿಗಳನ್ನು ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಉಪಾಧ್ಯಕ್ಷೆ ಕಲಾವತಿ, ಪುರಸಭೆಯ ಮಾಜಿ ಅಧ್ಯಕ್ಷರಾದ ವಿ.ನರಸಿಂಹ, ಗುಣರತ್ನ, ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ತಾಲ್ಲೂಕು ಸಮಿತಿಯ ಅಧ್ಯಕ್ಷ ರಾಜೀವ ಪಡುಕೋಣೆ, ಮನೆ ನಿವೇಶನ ಹೋರಾಟ ಸಮಿತಿಯ ಕೆ.ಶಂಕರ, ಕಾರ್ಮಿಕ ಸಂಘಟನೆಯ ಪ್ರಮುಖರಾದ ಮಹಾಬಲ ವಡೇರಹೋಬಳಿ, ಎಚ್.ನರಸಿಂಹ, ಅಶ್ವತ್ಥ್ ಕುಮಾರ್ ಉಪಸ್ಥಿತರಿದ್ದರು.
ಅಶೋಕ್ ಕುಮಾರ್ ಸ್ವಾಗತಿಸಿದರು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಾಲ್ಲೂಕು ಸಮಿತಿಯ ಕಾರ್ಯದರ್ಶಿ ವೆಂಕಟೇಶ ಕೋಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.