ADVERTISEMENT

ಹಕ್ಕುಪತ್ರ ಸಮಸ್ಯೆಯಲ್ಲಿ ನಾಲ್ಕು ಕುಟುಂಬ

ಮಡಿವಾಳ ಮಾಚಿದೇವ
Published 14 ಸೆಪ್ಟೆಂಬರ್ 2011, 10:20 IST
Last Updated 14 ಸೆಪ್ಟೆಂಬರ್ 2011, 10:20 IST
ಹಕ್ಕುಪತ್ರ ಸಮಸ್ಯೆಯಲ್ಲಿ ನಾಲ್ಕು ಕುಟುಂಬ
ಹಕ್ಕುಪತ್ರ ಸಮಸ್ಯೆಯಲ್ಲಿ ನಾಲ್ಕು ಕುಟುಂಬ   

ಸಿದ್ದಾಪುರ: ಸಮೀಪದ ಮಡಾಮಕ್ಕಿ ಹುಯ್ಯೊರುಮಕ್ಕಿ ಪರಿಶಿಷ್ಟರ ಜಾಗದ ಒತ್ತುವರಿ ಸಮಸ್ಯೆ 4 ಕುಟುಂಬಗಳಿಗೆ ಹಕ್ಕುಪತ್ರ ಪಡೆಯಲು ಕಗ್ಗಂಟಾಗಿದೆ.

ಭೂಮಿ ಒತ್ತುವರಿ ಜಾಗಕ್ಕೆ ಹೊಂದಿಕೊಂಡು ವಾಸಿಸುತ್ತಿರುವ ಸುಶೀಲಾ ಪೂಜಾರಿ, ಶಿವರಾಮ ಶೆಟ್ಟಿ, ಪ್ರಭಾಕರ ನಾಯ್ಕ, ಗಣಪು ಕುಲಾಲ್ ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಇವರು ಹಲವು ವರ್ಷಗಳಿಂದ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
 
ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಲು ನಿವಾಸಿಗಳು ಮುಂದಾದಾಗ ಒತ್ತುವರಿದಾರರು ಬೆದರಿಕೆ ಹಾಕಿ ಅರ್ಜಿ ಹಾಕದಂತೆ ಒತ್ತಡ ಹೇರಿದ್ದರು. 10 ವರ್ಷಗಳ ಹಿಂದೆ ಅರ್ಜಿ ಸಲ್ಲಿಸಿದಾಗ ಅಧಿಕಾರಿಗಳು ಆಗಮಿಸಿ ಸರ್ವೆ ಕಾರ್ಯ ನಡೆಸಿ ಡಿ. ಸಿ. ಮನ್ನಾ ಭೂಮಿ ಎಂಬ ಹಿಂಬರಹ ಪತ್ರ ನೀಡಿದ್ದರು.
 
ಅರ್ಜಿದಾರರಿಗೆ `ಡಿ ವರ್ಗದ ಸರ್ಕಾರಿ ಭೂಮಿ~ ಎಂದು ದೃಢೀಕರಿಸಲು ತಹಸೀಲ್ದಾರರು ಸೂಚಿಸಿದ್ದು ದಾಖಲೆ ಸಿದ್ಧಪಡಿಸಲಾಗದೇ ಕುಟುಂಬಗಳು ಸುಮ್ಮನಾಗಿವೆ. ಇತ್ತೀಚೆಗೆ ಅರಣ್ಯ ಹಕ್ಕು ಕಾನೂನಿನ ಅಡಿಯಲ್ಲಿ ಅರ್ಜಿ ಸಲ್ಲಿಸಿದರು.
 
ದಾಖಲೆಯಾಗಿ  75 ವರ್ಷದ ಭೂಮಿ ಒತ್ತುವರಿ ದಾಖಲೆಯನ್ನು  ಕುಟುಂಬಗಳಿಗೆ ದೃಢೀಕರಿಸಲು ಸಾಧ್ಯವಾಗದ ಕಾರಣದಿಂದ ಹಕ್ಕುಪತ್ರ ಪಡೆಯುವ ನಿವಾಸಿಗಳ ಕೊನೆಯ ಆಸೆ ಕಮರಿಹೋಗಿದೆ. ಹೀಗಾಗಿ ವಿಧವೆ ಸುಶೀಲಾ ಪೂಜಾರಿ ಸಮೀಪದ ಕಾಸನಮಕ್ಕಿಯಲ್ಲಿ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಒತ್ತುವರಿ ಗೊಂದಲದಿಂದ ಕುಟುಂಬಗಳಿಗೆ ಜಮೀನಿನ ಹಕ್ಕುಪತ್ರ ಮರೀಚಿಕೆಯಾಗಿ ಉಳಿದಿದೆ.

ಪರಿಶಿಷ್ಟರ ಭೂಮಿ ಒತ್ತುವರಿ ಜಾಗದಲ್ಲಿ ಒಂದೆಡೆ ಅಪಾರ ಕೃಷಿಯನ್ನು ಒತ್ತುವರಿದಾರರು ಮಾಡಿದ್ದು ಅದನ್ನು ಜಿಲಾಧಿಕಾರಿ ಅವರಿಗೆ ಹಸ್ತಾಂತರಿಸಬೇಕಾದ ಸಂಕಟಕ್ಕೆ ಸಿಲುಕಿದ್ದಾರೆ. ಇನ್ನೊಂದೆಡೆ ಪರಿಶಿಷ್ಟ ವರ್ಗದ 12 ಜನರು ಜಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಫಲಭರಿತ ಒತ್ತುವರಿ ಭೂಮಿ ಸಿಗುವ  ನಿರೀಕ್ಷೆಯಲ್ಲಿದ್ದಾರೆ. ಸಮೀಪ ಶಾಲಾ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡಿರುವ  ಅಕ್ಕಣಿ ನಾಯ್ಕ ಎಂಬವರನ್ನು  ಬಲಾತ್ಕಾರವಾಗಿ ಒಕ್ಕಲೆಬ್ಬಿಸಿದ್ದು ಜಾಗದ ನಿರೀಕ್ಷೆಯಲ್ಲಿದ್ದಾರೆ.

ಆಯೋಗಕ್ಕೂ ದೂರು: ಒತ್ತುವರಿ ತೆರವುಗೊಳಿಸುವಂತೆ 12 ಪರಿಶಿಷ್ಟ ಕುಟುಂಬಗಳು ಮತ್ತು ಸಾರ್ವಜನಿಕರು ಅರ್ಜಿಯನ್ನು ರಾಜ್ಯ ಮಾನವ ಹಕ್ಕು ಆಯೋಗ, ಜಿಲ್ಲಾಧಿಕಾರಿ, ಪ್ರಮುಖರಿಗೆ ವರ್ಷದ ಹಿಂದೆ  ಅರ್ಜಿ ಸಲ್ಲಿಸಿದ್ದರು.

ರಾಜಕೀಯ ಒತ್ತಡದಿಂದ ತಡವಾಗಿ ತೆರವು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ತಾಲ್ಲೂಕು ಮಾಪನಾಧಿಕಾರಿಗೆ ಹಲವು ತಿಂಗಳುಗಳ ಹಿಂದೆಯೇ ವರದಿ ನೀಡುವಂತೆ ಸೂಚನೆ ಇದ್ದರೂ ಕ್ರಮ ಕೈಗೊಳ್ಳದೆ ತಡವಾಡಿ ಸರ್ವೆ ಆರಂಭವಾಗಿದೆ. ಒತ್ತುವರಿ ತೆರವು ಆಗ್ರಹಿಸಿ ಅರ್ಜಿ ಬಂದ ನಂತರವೂ ಒತ್ತುವರಿದಾರರೊಬ್ಬರಿಗೆ ತಾಲ್ಲೂಕು ಮಾಪನಾಧಿಕಾರಿಗಳ ಕೃಪೆಯಿಂದ ಹಕ್ಕುಪತ್ರ ನೀಡಲಾಗಿದೆ ಎನ್ನಲಾಗಿದೆ. ತಾ.ಪಂ., ಗ್ರಾ.ಪಂ. ಮಾಜಿ ಸದಸ್ಯರು ಒತ್ತುವರಿ ಆರೋಪಕ್ಕೆ ಗುರಿಯಾಗಿದ್ದಾರೆ. ಸ್ಥಳಕ್ಕೆ ಅಮಾಸೆಬೈಲು ಠಾಣಾಧಿಕಾರಿ ಆರ್. ಶಾಂತಪ್ಪ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.