ADVERTISEMENT

‘ಹಳೆವಿದ್ಯಾರ್ಥಿಗಳೇ ವಿದ್ಯಾಸಂಸ್ಥೆಯ ಆಧಾರಸ್ತಂಭ’

ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನಲ್ಲಿ ಗುರು–ಶಿಷ್ಯರ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 28 ಮೇ 2018, 8:55 IST
Last Updated 28 ಮೇ 2018, 8:55 IST

ಶಿರ್ವ: ‘ಶಿಕ್ಷಣ ಸಂಸ್ಥೆಗಳ ಸರ್ವತೋಮುಖ ಪ್ರಗತಿಗೆ ಹಳೆವಿದ್ಯಾರ್ಥಿಗಳ ಕೊಡುಗೆ ಅಪಾರ. ಪ್ರತಿಯೊಂದು ಶಿಕ್ಷಣ ಸಂಸ್ಥೆಗೂ ಕೂಡ ಹಳೆವಿದ್ಯಾರ್ಥಿಗಳೇ ಆಧಾರ ಸ್ತಂಭವಾಗಿದ್ದಾರೆ’ ಎಂದು ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ ಹೆಗ್ಡೆ ತಿಳಿಸಿದರು.

ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ 1993ನೇ ಸಾಲಿನ ವಿದ್ಯಾರ್ಥಿಗಳು ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿರ್ವ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ 38 ವರ್ಷಗಳ ಇತಿಹಾಸದಲ್ಲಿ ಬಿಎ ತರಗತಿಯಲ್ಲಿ ಅತ್ಯಧಿಕ 85 ವಿದ್ಯಾರ್ಥಿಗಳನ್ನು ಹೊಂದಿದ್ದ 1993ನೇ ಬ್ಯಾಚ್‌ನ ವಿದ್ಯಾರ್ಥಿಗಳು 25 ವರ್ಷಗಳ ನಂತರ ಸಂಘಟಿತರಾಗಿ ಕಾಲೇಜಿನಲ್ಲಿ ಸಮಾವೇಶಗೊಂಡಿದ್ದಾರೆ. ಈ ಮೂಲಕ ತಮ್ಮ ಹಳೆಯ ಸವಿನೆನಪುಗಳ ವಿನಿಮಯದೊಂದಿಗೆ ವಿದ್ಯೆ ಕಲಿಸಿದ ಗುರುಗಳನ್ನು ಗೌರವಿಸುವ ಕಾರ್ಯ ನಡೆಸಿರುವುದು ಅಭಿನಂದನೀಯ ಎಂದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಪ್ರೊ. ಕರುಣಾಕರ ನಾಯಕ್ ಹಳೆವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, 25 ವರ್ಷಗಳ ಬಳಿಕ 76 ವಿದ್ಯಾರ್ಥಿಗಳು ಒಂದಾಗಿ ಸೇರಿದ ಈ ಕ್ಷಣ ಅವಿಸ್ಮರಣಿಯ ಹಾಗೂ ಮನಸ್ಸಿಗೆ ಅತ್ಯಂತ ಆನಂದ ನೀಡಿದೆ ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ.ಭಾಸ್ಕರ ಶೆಟ್ಟಿ ಮಾತನಾಡಿ, ಸಂಸ್ಕಾರವಂತ ಮಕ್ಕಳೇ ನಮ್ಮ ಆಸ್ತಿ. ಕೃತಜ್ಞತಾ ಭಾವನೆಯೇ ಮನಸ್ಸಿಗೆ ಅತ್ಯಂತ ಹೆಚ್ಚಿನ ಸಂತೋಷ ನೀಡುತ್ತದೆ. ನಮ್ಮಲ್ಲಿ ಉತ್ತಮ ಮೌಲ್ಯಗಳು ಜಾಗೃತವಾದಾಗ ಮಾತ್ರ ಮೌಲ್ಯಾಧಾರಿತ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಈ ಸಂದರ್ಭ ಗುರುಗಳಾದ ಪ್ರೊ. ವೈ.ಭಾಸ್ಕರ ಶೆಟ್ಟಿ, ಡಾ.ಶಾರದಾ ಎಂ., ಡಾ.ಸುಧಾಕರ ಮಾರ್ಲ ಕೆ., ಪ್ರೊ.ವಿನೋದ್ ನಾಥ್, ಪ್ರೊ.ಕರುಣಾಕರ ನಾಯಕ್, ಮಂಜುನಾಥ್ ಕೆ.ಜಿ, ಸುರೇಂದ್ರ ಶೆಟ್ಟಿ ಎಚ್., ರಘುರಾಮ ಶೆಟ್ಟಿ, ಮುರುಗೇಶ್, ನಯನಾ, ರಾಮದಾಸ್ ಪ್ರಭು, ರಮಾನಂದ ಶೆಟ್ಟಿಗಾರ್, ಲಕ್ಷ್ಮೀ, ಗೀತಾ ಹಾಗೂ ಕಾಲೇಜಿನ ಸಿಬ್ಬಂದಿವರ್ಗ ಮತ್ತು ಈಗಿನ ಉಪನ್ಯಾಸಕರನ್ನು ಗೌರವಿಸಿ, ಗುರುವಂದನೆ ಸಲ್ಲಿಸಲಾಯಿತು.

ಹಳೆವಿದ್ಯಾರ್ಥಿಗಳಾದ ಉಮೇಶ ಶೆಟ್ಟಿ, ದಿವಾಕರ ಶೆಟ್ಟಿ, ಗಂಗಾಧರ ಶೆಟ್ಟಿ, ಸಚ್ಚಿದಾನಂದ ಹೆಗ್ಡೆ, ಪ್ರಸಾದ್ ಶೆಟ್ಟಿ ಕುತ್ಯಾರು, ಶುಭನಾ ಸತೀಶ್ ಶೆಟ್ಟಿ ಮುಂಬೈ, ಪ್ರಭಾವತಿ ಶೆಟ್ಟಿ ಉಪಸ್ಥಿತರಿದ್ದರು. ಕುತ್ಯಾರು ನವೀನ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಶ್ಚಂದ್ರ ಹೆಗ್ಡೆ ಸ್ವಾಗತಿಸಿದರು. ಬಾಬುರಾಯ ಆಚಾರ್ಯ, ಶಾಂತಾರಾಮ ವಾಗ್ಳೆ ನಿರೂಪಿಸಿದರು. ಸುರೇಶ್ ಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.