ADVERTISEMENT

ಹಿಂದೂಗಳ ಕ್ರಿಯಾಶೀಲತೆಯಿಂದ ರಾಷ್ಟ್ರಕ್ಕೆ ಮನ್ನಣೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 10:20 IST
Last Updated 27 ಫೆಬ್ರುವರಿ 2011, 10:20 IST

ಬ್ರಹ್ಮಾವರ: ಇಂದು ಭಾರತ ದೇಶದಲ್ಲಿ ಹಿಂದೂ ಸಮಾಜ ಕ್ಷೀಣಿಸುತ್ತಾ ಇದೆಯಾದರೂ ಭಾರತೀಯರ ಕ್ರಿಯಾಶೀಲತೆ, ಪ್ರಾಮಾಣಿಕತೆ, ಹಿಂದೂ ಧರ್ಮ ಸಂಸ್ಕೃತಿಯಿಂದ ಜಗತ್ತಿನಲ್ಲಿಯೇ ಮನ್ನಣೆ ದೊರಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.ಮುಂಡ್ಕಿನಜೆಡ್ಡಿನ ಆರ್.ಕೆ.ಪಾಟ್ಕರ್ ಶಾರದಾ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಪ್ರಯುಕ್ತ ಶುಕ್ರವಾರ ಧರ್ಮ ಸಂಸ್ಕೃತಿ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಅಸ್ತಿತ್ವಕ್ಕಾಗಿ ಹೋರಾಟ ನಡೆಸಲು ಎಲ್ಲರೂ ಒಂದಾಗಬೇಕು. ನಮ್ಮ ಮನೆಯಲ್ಲಿ ಹುಟ್ಟುವ ಪ್ರತಿಯೊಂದೂ ಹೆಣ್ಣು ಮಗುವನ್ನು ತಾಯಿಯಂತೆ ಪೂಜಿಸಿದಲ್ಲಿ ಹಿಂದೂ ಧರ್ಮದ ಮೌಲ್ಯ ಇಡೀ ಜಗತ್ತಿಗೇ ಹರಡುತ್ತದೆ. ಭಗವಂತನೊಂದಿಗೆ ನಿರಂತರ ಸಂಪರ್ಕ ಹೊಂದಿದ ದೇಶ ನಮ್ಮದು. ಸ್ವಂತ ಲಾಭಕೋಸ್ಕರ ಭಗವಂತನನ್ನು ಧ್ಯಾನ ಮಾಡದೇ ಹಿಂದೂ ಸಮಾಜವನ್ನು ರಕ್ಷಿಸುವಂತೆ, ಕೆಟ್ಟ ಶಕ್ತಿಗಳನ್ನು ಎದುರಿಸುವ ಶಕ್ತಿ ನಮಗೆ ದೊರಕಲಿ ಎನ್ನುವ ಮನೋಭಾವನೆ ಬೆಳೆಯಲಿ ಎಂದು ಅವರು ಹೇಳಿದರು.

ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಶ್ರೀವಾರಿ ಫೌಂಡೇಶನ್‌ನ ಎಸ್.ವೆಂಕಟೇಶ್ ಮೂರ್ತಿ, ಮುಂಬೈ ಉದ್ಯಮಿ ಪರ್ವತ್ ಶೆಟ್ಟಿ, ಉದ್ಯಮಿಗಳಾದ ಉಡುಪಿಯ ಪಿ.ಪುರುಷೋತ್ತಮ ಶೆಟ್ಟಿ, ಬೆಂಗಳೂರಿನ ಪ್ರಕಾಶ್ ಶೆಟ್ಟಿ, ಮುಂಬೈ ಭೀವಂಡಿಯ ಕಾರ್ಪೋರೇಟರ್ ಸಂತೋಷ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಕೆ. ಉದಯಕುಮಾರ್ ಶೆಟ್ಟಿ, ಉಡುಪಿ ನಗರಸಭಾಧ್ಯಕ್ಷ ಕಿರಣ್ ಕುಮಾರ್, ಉಡುಪಿ ನಗರಸಭೆ ಪೌರಾಯುಕ್ತ ಗೋಕುಲ್‌ದಾಸ್ ನಾಯಕ್, ದ.ಕ.ಜಿಲ್ಲಾ ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಆರ್ಬಿ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಜ್ ಹೆಗ್ಡೆ, ಪರ್ಕಳದ ದಿಲೀಪ್‌ರಾಜ್ ಹೆಗ್ಡೆ, ಮಂಗಳೂರಿನ ದೇವಾನಂದ ಶೆಟ್ಟಿ, ಮುಂಬೈಯ ರಿತೇಶ್ ಶೆಟ್ಟಿ, ಎರ್ಮಾಳ್ ಹರೀಶ್ ಶೆಟ್ಟಿ, ಡಾ.ಎಂ.ಪಿ.ರಾಘವೇಂದ್ರ ರಾವ್, ಶ್ಯಾಮರಾಜ್ ಹೆಗ್ಡೆ, ಮಹೇಶ್ ಠಾಕೂರ್, ಕಮಲಾಕ್ಷ ಹೆಬ್ಬಾರ್, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸರ್ಪು ಸದಾನಂದ ಪಾಟೀಲ್, ಆರ್.ವಿ.ಪಾಟೀಲ್, ಶ್ರೀಕಾಂತ್ ಸಾಮಂತ್, ಕೆ.ಎಲ್.ಕುಂಡಂತಾಯ ಇದ್ದರು.

ವಿಶೇಷ ಆಕರ್ಷಣೆ: ಕನ್ನಡ ಚಲನಚಿತ್ರ ರಂಗದ ಪ್ರಸಿದ್ಧ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮುಂಗಾರು ಮಳೆ ಖ್ಯಾತಿಯ ಗೋಲ್ಡನ್‌ಸ್ಟಾರ್ ಗಣೇಶ್ ಸಮಾರಂಭಕ್ಕೆ ಮೆರುಗು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.