ADVERTISEMENT

ಹೆಚ್ಚಿನ ವಾಹನಕ್ಕೆ ಇಲಾಖೆ ಸಚಿವರಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 5:58 IST
Last Updated 20 ಡಿಸೆಂಬರ್ 2017, 5:58 IST

ಉಡುಪಿ: ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ಅಂಗವಿಕಲರಿಗೂ ನಾಲ್ಕು ಚಕ್ರ ವಾಹನ ವಿತರಿಸಲು ಕ್ರಮ ಕೈಗೊಳ್ಳ ಲಾಗುವುದು ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ಹಿರಿಯ ನಾಗರಿಕ ಮತ್ತು ಅಂಗವಿಕರ ಕಲ್ಯಾಣ ಇಲಾಖೆ ನಗರದ ಆಶಾ ನಿಲಯ ವಿಶೇಷ ಮಕ್ಕಳ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಂಟು ಮಂದಿಗೆ ನಾಲ್ಕು ಚಕ್ರ ವಾಹನ ವಿತರಿಸಿ ಮಾತನಾಡಿದರು.

ಕಳೆದ ವರ್ಷ 36 ನಾಲ್ಕು ಚಕ್ರ ವಾಹನ ವಿತರಿಸಲಾಗಿದೆ. ಈ ವರ್ಷವೂ ಅಷ್ಟೇ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆದರೆ, 60 ಅರ್ಜಿ ಬಂದಿದೆ ಎಂದು ಅಂಗವಿಕಲರ ಕಲ್ಯಾಣ ಅಧಿಕಾರಿ ತಿಳಿಸಿದ್ದಾರೆ. ಆದ್ದರಿಂದ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರೊಂದಿಗೆ ಮಾತನಾಡಿ, ಹೆಚ್ಚು ವಾಹನಗಳನ್ನು ಪಡೆದುಕೊಳ್ಳಲಾಗುವುದು ಎಂದರು.

ADVERTISEMENT

ಸಂಚಾರ ಅಂಗವಿಕಲರ ಬಹುದೊಡ್ಡ ಸಮಸ್ಯೆಯಾಗಿದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಬೇಕಾದರೆ ಅವರು ಇತರರನ್ನು ಆಶ್ರಯಿಸಬೇಕಾಗುತ್ತದೆ. ವಾಹನ ಇದ್ದರೆ ಸುಲಭವಾಗುತ್ತದೆ. ಅದು ಅವರ ಅಗತ್ಯಗಳಲ್ಲಿ ಒಂದು ಎಂದು ಹೇಳಿದರು.

ಅಂಗವಿಕಲರ ಕಲ್ಯಾಣ ಇಲಾಖೆ ಮಾತ್ರವಲ್ಲದೆ, ಪಂಚಾಯಿತಿಗಳಲ್ಲಿ ಶೇ 3ರ ಅನುದಾನ ಬಳಸಿ ಸಹ ನಾಲ್ಕು ಚಕ್ರ ವಾಹನ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಿಂದಲೂ ನೀಡಲು ಅವಕಾಶ ಇದೆ ಎಂದು ಅವರು ಹೇಳಿದರು.

ಅಂಗವಿಕಲರ ಅನುಕೂಲಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ವಾಹನಗಳನ್ನು ವಿತರಿಸಲಾಗುತ್ತಿದೆ. ಈ ವರ್ಷ ಒಟ್ಟು 2 ಸಾವಿರ ವಾಹನ ವಿತರಿಸುವ ಗುರಿಯನ್ನು ಇಲಾಖೆ ಹೊಂದಿದ್ದು, ಅದರಲ್ಲಿ ಜಿಲ್ಲೆಗೆ 36 ಸಿಗುವ ನಿರೀಕ್ಷೆ ಇದೆ ಎಂದು ಅಂಗವಿಕಲರ ಕಲ್ಯಾಣಾಧಿಕಾರಿ ನಿರಂಜನ್ ಭಟ್‌ ಹೇಳಿದರು. ಆಶಾ ನಿಲಯದ ಮುಖ್ಯ ಶಿಕ್ಷಕಿ ಜಯ ವಿಜಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.