ADVERTISEMENT

ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 10:13 IST
Last Updated 19 ಸೆಪ್ಟೆಂಬರ್ 2013, 10:13 IST

ಶಿರೂರು (ಬೈಂದೂರು): ಶಿರೂರು–ಬೈಂದೂರು ನಡುವಿನ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಶಿರೂರು ಮಾರ್ಕೆಟ್‌ ಬಳಿ ರೈತಸಂಘ ಮತ್ತಿತರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಅಣಕ ಕಂಬಳ ನಡೆಸಿ ಪ್ರತಿಭಟನೆ ನಡೆಸಿದರು.

ಬೈಂದೂರಿನಿಂದ ಶಿರೂರು ವರೆಗಿನ ಹೆದ್ದಾರಿ ಹೊಂಡಗುಂಡಿಗಳಿಂದ ತುಂಬಿ ಹೋಗಿದ್ದು ಸಂಚಾರ ಅಸಾಧ್ಯವೆನಿಸುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಕ್ಷಣ ಸುಸ್ಥಿತಿಗೆ ತರಬೇಕೆಂದು ಆಗ್ರಹಿಸಿ ತಾಲ್ಲೂಕು ರೈತಸಂಘ ಮತ್ತು ಇತರೆ ಸಂಘಟನೆಗಳ ಸದಸ್ಯರು  ಹೆದ್ದಾರಿ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದರು.

ಈ ಸಂದಭರ್ದಲ್ಲಿ ಮಾತನಾಡಿದ ರೈತಸಂಘದ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಮಳೆಗಾಲಕ್ಕಿಂತ  ಮುಂಚೆ ಈ ರಸ್ತೆಯನ್ನು ದುರಸ್ತಿಗೊಳಿಸದೇ ನಿಲರ್ಕ್ಷಿಸಿದ ಪರಿಣಾಮವಾಗಿ ಬೃಹತ್‌ ಗಾತ್ರದ ಗುಂಡಿಗಳು ಬಿದ್ದಿವೆ. ವಾಹನ ಗಳಿಗೆ ದಕ್ಕೆಯಾದುದಲ್ಲದೆ, ಹಲವು ಅಪಘಾತಗಳಾಗಿ ಸಾವು ನೋವುಗಳು ಸಂಭವಿಸಿವೆ. ಮಳೆ ನಿಲುಗಡೆ ಯಾಗಿದ್ದರೂ ಇಲಾಖೆ ಇನ್ನೂ ಇತ್ತ ದೃಷ್ಟಿ ಹರಿಸಿಲ್ಲ. ಅದನ್ನು ಎಚ್ಚರಿಸಲು ಈ ಸಾಂಕೇತಿಕ ಪ್ರತಿಭಟನೆ ಹಮ್ಮಿ ಕೊಂಡಿದ್ದು, ಎರಡು ವಾರಗಳೊಳಗೆ ದುರಸ್ತಿ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸ್ಥಳೀಯ ಮುಖಂಡ ಪುಷ್ಪರಾಜ ಶೆಟ್ಟಿ ತಕ್ಷಣ ಕೆಲಸ ಆರಂಭಿಸದಿದ್ದರೆ ಶಿರೂರು ಬಂದ್‌ ನಡೆಸಿ, ಅದರೊಂದಿಗೆ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗುವುದು ಎಂದರು. ಶಿರೂರು ಪೇಟೆಯಿಂದ ಮಾರ್ಕೆಟ್‌ ತನಕ ಅಣಕ ಕಂಬಳ, ಇಲಾಖೆ ವಿರುದ್ಧ ದಿಕ್ಕಾರ ಸಹಿತ ಮೆರವಣಿಗೆ ನಡೆಯಿತು. ಬೈಂದೂರು ಉಪ ತಹಶೀಲ್ದಾರ್‌ ನರಸಿಂಹ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಗಳ ಮುಖಂಡರಾದ ಎಚ್‌. ವಸಂತ ಹೆಗ್ಡೆ, ದಿನೇಶಕುಮಾರ್‌, ಫಯಾಜ್‌ ಆಲಿ, ದಿವಾಕರ ಶೆಟ್ಟಿ, ಮಂಜುನಾಥ ಪೂಜಾರಿ, ಹಸನ್‌ ಮಾವಡ, ರಿಕ್ಷಾ ಚಾಲಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.