ADVERTISEMENT

ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 8:45 IST
Last Updated 3 ಫೆಬ್ರುವರಿ 2011, 8:45 IST

ಹೆಬ್ರಿ: ಹೆಬ್ರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ರೂ. 1.15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದ್ದು, ನವೀಕೃತ ಕಟ್ಟಡ ಇದೇ 4ರಂದು ಲೋಕಾರ್ಪಣೆಗೊಳ್ಳಲಿದೆ.

ಮಂಗಳೂರು ವಿಶ್ವವಿದ್ಯಾಲಯ ಆರಂಭವಾದ ಬಳಿಕ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಆರಂಭಿಸಿದ ಮೊದಲ ಪ್ರಥಮದರ್ಜೆ ಕಾಲೇಜು ಎಂಬ ಹೆಗ್ಗಳಿಕೆ ಹೆಬ್ರಿ ಕಾಲೇಜಿಗೆ ದೊರಕಿತ್ತು. ಮೂವತ್ತೈದು ಎಕರೆ ಜಾಗದಲ್ಲಿ ಆರಂಭಗೊಂಡ ಕಾಲೇಜಿನಲ್ಲಿ ಈ ತನಕ ಸಹಸ್ರಾರು ಮಂದಿ ವ್ಯಾಸಂಗ ಮಾಡಿದ್ದಾರೆ. ಉನ್ನತ ಶಿಕ್ಷಣಕ್ಕೆ ಹೆಬ್ರಿ ಪರಿಸರದ ಮಕ್ಕಳು ಉಡುಪಿ ಮತ್ತಿತರ ಕಡೆ ಹೋಗಬೇಕಾಗಿರುವುದನ್ನು ಮನಗಂಡು ಸ್ಥಳೀಯ ಮುಖಂಡರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಎಂ. ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಇಲ್ಲಿ ಕಾಲೇಜಿ ಆರಂಭಗೊಂಡಿತ್ತು. ಮೊದಲು ಹೆಬ್ರಿ ಸಮಾಜಮಂದಿರ ಕಟ್ಟಡದಲ್ಲಿ ಕಾಲೇಜು ಆರಂಭಿಸಲಾಗಿತ್ತು.

ಆಗ ಕಟ್ಟಡ ವಿನ್ಯಾಸದ ಮಾಹಿತಿ ಹೆಚ್ಚು ತಿಳಿದಿರದ ಕಾರಣ ಹೆಬ್ರಿಯಲ್ಲಿ ಪದವಿ ಕಾಲೇಜಿಗೆ ಮಲೆನಾಡು ಬಯಲು ಸೀಮೆಯ ಮಾದರಿಯಲ್ಲಿ ಕಟ್ಟಡ ನಿರ್ಮಿಸಲಾಗಿತ್ತು. ಇಲ್ಲಿನ ಮಳೆಗೆ ಹೊಂದಿಕೊಳ್ಳದೆ ನಿರಂತರವಾಗಿ ಕಟ್ಟಡ ಸೋರುತ್ತಿತ್ತು. ಮಳೆ ನೀರಿನಲ್ಲಿ ಪಾಠ ಮಾಡುವುದು ಕಷ್ಟವಾಗುತ್ತಿತ್ತು ಹಲವು ಬಾರಿ ‘ಸೋರುತ್ತಿರುವ ನಮ್ಮೂರ ಕಾಲೇಜು’  ಎಂಬ ‘ಪ್ರಜಾವಾಣಿ’  ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಇಂದಿನ ಶಾಸಕ ಅಂದಿನ ಪ್ರಾಂಶುಪಾಲ!:  ಹೆಬ್ರಿ ಸಮಾಜ ಮಂದಿರದಲ್ಲಿ ಕಾಲೇಜು ಆರಂಭವಾದ ಖುಷಿಯಲ್ಲಿ 40 ಮಕ್ಕಳು ಕಾಲೇಜಿಗೆ ಸೇರಿದ್ದರು. ಆದರೆ 3 ತಿಂಗಳು ಉಪನ್ಯಾಸಕರಾಗಲಿ, ಪ್ರಾಂಶುಪಾಲರಾಗಲಿ ಬರದಿದ್ದಾಗ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿದ ಪೋಷಕರಿಂದ ಅಪಸ್ವರ ಎದ್ದಿತ್ತು. ಕಾಲೇಜು ಮಂಜೂರಾಗಿದ್ದು ಸುಳ್ಳು.ಇವರಿಗೆಲ್ಲ ಮಕ್ಕಳಾಟಿಕೆ ಎಂಬ ದೂರು ಕೇಳಿ ಬಂದಿತ್ತು. ಆಗ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ ಎಚ್. ಗೋಪಾಲ ಭಂಡಾರಿ ಕಾಲೇಜು ಮುನ್ನಡೆಸಿದ್ದರು. ಅಂದು ತಾವು ಈ ನಿರ್ಧಾರ ಕೈಗೊಳ್ಳದಿದ್ದರೆ  ಹೆಬ್ರಿಗೆ ಮಂಜೂರಾಗಿದ್ದ  ಪದವಿ ಕಾಲೇಜು ರದ್ದಾಗುವ ಸಾಧ್ಯತೆ ಇತ್ತು ಎಂದು ಗೋಪಾಲ ಭಂಡಾರಿ ಸ್ಮರಿಸುತ್ತಾರೆ.

ಈಗ ಕಾಯಕಲ್ಪ: ಸೋರುತ್ತಿದ್ದ ಕಾಲೇಜಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಚಿಸಿ ರೂ 1.15 ಕೋಟಿ ವೆಚ್ಚದಲ್ಲಿ ಮೇಲಂತಸ್ತು, ತರಗತಿ ಕೋಣೆಗಳು, ನಾಲ್ಕು ತರಗತಿ ಕೋಣೆಗಳನ್ನು ನಿರ್ಮಿಸಲಾಗಿದೆ. ಡಾಂಬರು ರಸ್ತೆ, ಬೃಹತ್ ಆವರಣ ಗೋಡೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.
ಮಕ್ಕಳಿಗೆ ಖುಷಿ:  ‘ಇಲ್ಲಿ ವ್ಯಾಸಂಗಕ್ಕೆ ಬರುತ್ತಿರುವವರನ್ನು ಕಂಡು ಕೆಲವರು ತಮಾಷೆ ಮಾಡುತ್ತಿದ್ದರು. ನಮಗೂ ಕಟ್ಟಡ ಕಂಡು ಬೇಸರವಾಗುತ್ತಿತ್ತು. ಈಗ ತುಂಬಾ ಖುಷಿಯಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡರು.

ವಿವಿ ಕಾಲೇಜು ಮಾದರಿ: ಗ್ರಾಮಾಂತರ ಪ್ರದೇಶದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಎಂಬ ಉದ್ದೇಶದಿಂದ ಕಾಲೇಜು ಅಭಿವೃದ್ಧಿಪಡಿಸಿದ್ದು, ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ರೂ. 5 ಲಕ್ಷ, ಶಾಸಕರ ನಿಧಿಯಿಂದ ರೂ. 2 ಲಕ್ಷ, ನಬಾರ್ಡ್ ನಿಂದ ರೂ 25 ಲಕ್ಷ, ಯೋಜನೇತರ 20 : 50 ನಿಧಿಯಿಂದ ರೂ 83 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಯುಜಿಸಿಯಿಂದ ರೂ 82 ಲಕ್ಷ ಮಂಜೂರಾಗಿದ್ದು 40 ಲಕ್ಷ ಬಿಡುಗಡೆಯಾಗಿದೆ ಎಂದು ಶಾಸಕ ಗೋಪಾಲ ಭಂಡಾರಿ ತಿಳಿಸಿದರು.
ಭವಿಷ್ಯದಲ್ಲಿ ವಿಶೇಷ ವಿನ್ಯಾಸದೊಂದಿಗೆ ವಿಶ್ವವಿದ್ಯಾಲಯದ ಮಾದರಿಯಲ್ಲಿ ಕಟ್ಟಡ ರಚಿಸಲಾಗುವುದು. ಮುಂದಿನ ವರ್ಷದಿಂದ ಎಂಬಿಎ, ಬಿಕಾಂ ಸಹಿತ ವಿಶೇಷ ಕೋರ್ಸ್ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಇದೇ 4 ರಂದು ನವೀಕೃತ ಕಟ್ಟಡವನ್ನು ಲೋಕಾರ್ಪಣೆ ಮಾಡುವರು. ಶಾಸಕ ಗೋಪಾಲ ಭಂಡಾರಿ ಅಧ್ಯಕ್ಷತೆ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.