ADVERTISEMENT

‘ಅಡಿಗರ ಹೆಸರಲ್ಲಿ ಪ್ರಶಸ್ತಿ ಸ್ಥಾಪನೆಯಾಗಲಿ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:00 IST
Last Updated 17 ಡಿಸೆಂಬರ್ 2013, 8:00 IST

ಬೈಂದೂರು: ಕನ್ನಡ ಕಾವ್ಯ ಪ್ರಪಂಚಕ್ಕೆ ಅತ್ಯಂತ ಮೌಲಿಕವೆನಿಸುವ ಕೊಡುಗೆ ನೀಡಿರುವ ಮೊಗೇರಿ ಗೋಪಾಲಕೃಷ್ಣ ಅಡಿಗರನ್ನು ಅವರ ಅರ್ಹತೆಗೆ ತಕ್ಕಂತೆ ಗುರುತಿಸುವ ಕಾರ್ಯ ಆಗಿಲ್ಲ. ಹಲವು ಸಾಹಿತಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಅಡಿಗರ ಹೆಸರಿನಲ್ಲೂ ದೊಡ್ಡ ಪ್ರಶಸ್ತಿಯೊಂದನ್ನು ಪ್ರವರ್ತಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಅವರ ಹುಟ್ಟೂರಾದ ಬೈಂದೂರಿನ ಜನ ಕಾರ್ಯೋನ್ಮುಖರಾಗಬೇಕು ಎಂದು ಸಾಹಿತಿ, ಸಂಘಟಕ ಕಾಂತಾವರದ ಡಾ. ನಾ ಮೊಗಸಾಲೆ ಹೇಳಿದರು.

ಇಲ್ಲಿನ ಸುರಭಿ ಸಾಂಸ್ಕೃತಿಕ ಸಾಹಿತ್ಯಿಕ ಸೇವಾ ಪ್ರತಿಷ್ಠಾನದ ವಾರ್ಷಿಕ ಸಂಭ್ರಮ ‘ಸುರಭಿ ಜೈಸಿರಿ’ ಕಾರ್ಯಕ್ರಮದ ಮೂರನೆಯ ದಿನವಾದ ಶನಿವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ಪ್ರವರ್ತಿಸಿರುವ ‘ಬಿಂದುಶ್ರೀ’ ಪ್ರಶಸ್ತಿಯನ್ನು ಕವಿ ಎಚ್‌. ಡುಂಡಿರಾಜ್‌ ಅವರಿಗೆ ಪ್ರದಾನಮಾಡಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ಗೋಪಾಲ ಪೂಜಾರಿ, ಕ್ಷೇತ್ರದ ಹೆಮ್ಮೆಯ ಕವಿ ಅಡಿಗರ ಶಾಶ್ವತ ಸ್ಮರಣೆಗೆ ಸೂಕ್ತ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡುಂಡಿರಾಜ್, ತಾವು ಹುಟ್ಟಿ ಬೆಳೆದ ತಾಲ್ಲೂಕಿನ ಸಂಸ್ಥೆ ನೀಡಿದ ಪ್ರಶಸ್ತಿಯಿಂದ ಸಂತಸವಾಗಿದ್ದು, ಇನ್ನಷ್ಟು ಕಾವ್ಯ ರಚನೆಗೆ ಪ್ರೋತ್ಸಾಹ ದೊರೆತಂತಾಗಿದೆ ಎಂದರು. ಸಂಸ್ಥೆಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು.

ಸಲಹೆಗಾರ ಓಂ ಗಣೇಶ ಉಪ್ಪುಂದ ಪ್ರಶಸ್ತಿಯ ವಿವರ ನೀಡಿದರು. ಆಯ್ಕೆ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಎಸ್. ಜನಾರ್ದನ ಡುಂಡಿರಾಜ್‌ ಅವರನ್ನು ಪರಿಚಯಿಸಿದರು. ಗಣಪತಿ ಹೋಬಳಿದಾರ್‌ ವಂದಿಸಿದರು. ಸುಧಾಕರ ಪಿ. ಬೈಂದೂರು ನಿರೂಪಿಸಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್. ರಾಜು ಪೂಜಾರಿ, ರೈಲ್ವೆ ಯಾತ್ರಿಸಂಘದ ಅಧ್ಯಕ್ಷ ಕೆ. ವೆಂಕಟೇಶ ಕಿಣಿ, ಸುರಭಿ ಪಾಲಕರ ಸಮಿತಿಯ ಅಧ್ಯಕ್ಷೆ ಪಾರ್ವತಿ ಟೀಚರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.