ADVERTISEMENT

‘ಸಹಕಾರಿ ಕ್ಷೇತ್ರ–ಅವಕಾಶ ಬಳಸಿ’

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 6:21 IST
Last Updated 18 ಡಿಸೆಂಬರ್ 2013, 6:21 IST

ಉಡುಪಿ: ‘ಕ್ರೆಡಿಟ್‌ ವ್ಯವಹಾರಕ್ಕೆ ಮಾತ್ರ ಸೀಮಿತಗೊಳ್ಳದೆ ಸಹಕಾರಿ ಕ್ಷೇತ್ರದಲ್ಲಿರುವ ಹಲವು ಅವಕಾಶಗ­ಳನ್ನು ಉಪಯೋಗಿಸಿಕೊಳ್ಳಲು ಕಾರ್ಯೋ­ನ್ಮುಖರಾಗಬೇಕು. ಸಹಕಾರಿ ಕ್ಷೇತ್ರ ಎಂದರೆ ಕ್ರೆಡಿಟ್‌ ಮಾತ್ರ ಎಂಬ ಭಾವನೆಯಿಂದ ಹೊರಬರಬೇಕು’ ಎಂದು ಜಿಲ್ಲಾ ಸಹಕಾರ ಯೂನಿ­ಯನ್‌ನ ಅಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಉಡುಪಿ ತಾಲ್ಲೂಕು ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿಯ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿ­ಸಿದ್ದ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆ­ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಹಕಾರಿಗಳು ಮೊದಲು ಸದಸ್ಯರಿ­ಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಾಯ್ದೆಗಳ ಬದಲಾವಣೆಯಿಂದಾಗಿ ಸರ್ಕಾ­ರ­ಕ್ಕಾಗಿ ದುಡಿಯಬೇಕಾದ ಅನಿ­ವಾ­ರ್ಯತೆ ಎದುರಾಗಿದೆ. ಶೇ35ರಷ್ಟು ಲಾಭ ತೆರಿಗೆ ರೂಪದಲ್ಲಿ ಪಾವತಿಸ­ಬೇಕಾಗಿದೆ. ಇಂತಹ ವ್ಯವಸ್ಥೆಯಲ್ಲಿ ದುಡಿದು ಲಾಭ ಮಾಡಿ ಡಿವಿಡೆಂಟ್‌ ನೀಡುವುದು ಕಷ್ಟ. ಯಾವುದೇ ಕಾಯ್ದೆ ಅಂತಿಮವಲ್ಲ, ಎಲ್ಲರ ಸಹಕಾರ ಇದ್ದರೆ ಕಾಯ್ದೆಯನ್ನು ಬದಲಾಯಿಸಬಹುದು ಎಂದು ಅವರು ಹೇಳಿದರು.

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ರಾಜಕೀಯ ಇದೆ. ಆದರೆ ಈ ರಾಜಕೀಯವನ್ನು ಚುನಾವಣೆಗೂ ಒಂದು ತಿಂಗಳ ಮೊದಲು ಆರಂಭಿಸಿ ಚುನಾವಣೆ ಮುಗಿದ 24 ಗಂಟೆಗಳ ಒಳಗೆ ಬಿಟ್ಟುಬಿಡಬೇಕು. ಆ ನಂತರವೂ ರಾಜಕೀಯ ಮುಂದುವರೆದರೆ ಸಹಕಾರ ಕ್ಷೇತ್ರಕ್ಕೆ ಧಕ್ಕೆ ಬರುತ್ತದೆ. ಅವಿಭಜಿತ ಜಿಲ್ಲೆಯಲ್ಲಿ ರಾಜಕೀಯ ಇದ್ದರೂ ಚುನಾವಣೆಯ ನಂತರ ಅದು ಇರುವುದಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ಎಸ್‌.ಆರ್‌. ಸತೀಶ್‌ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ನಿಯಮಿತದ ನಿರ್ದೇಶಕ ಭಾಸ್ಕರ ಕಾಮತ್‌, ಜಿಲ್ಲಾ ಸಹಕಾರ ಯೂನಿ­ಯನ್‌ನ ಮುಖ್ಯ ಕಾರ್ಯನಿರ್ವಹಣಾ­ಧಿಕಾರಿ ಎಚ್‌.ಬಿ. ಜಗದೀಶ್‌, ಉತ್ತರ ಕನ್ನಡ ಜಿಲ್ಲೆಯ ಲೆಕ್ಕಪರಿಶೋಧಕ ಸುಬ್ರಹ್ಮಣ್ಯ ಹೆಗ್ಡೆ, ಪ್ರಸನ್ನಕುಮಾರ್‌ ಮಂಗಳೂರು ಉಪಸ್ಥಿತರಿದ್ದರು. ಚೇತನಾ ಪ್ರಾರ್ಥಿಸಿದರು. ಶಿವಕು­ಮಾರ್‌ ಬಿರಾದರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.