ADVERTISEMENT

10ಸಾವಿರ ಯೂನಿಟ್ ರಕ್ತ ಸಂಗ್ರಹ ಗುರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 10:40 IST
Last Updated 20 ಫೆಬ್ರುವರಿ 2012, 10:40 IST

ಉಡುಪಿ: ಅಂಬಲಪಾಡಿಯ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್  ಹಾಗೂ ಮೊಗವೀರ ಸಂಘಟನೆ  ಆಶ್ರಯದಲ್ಲಿ ಗುರಿಕಾರರ ಸಮಾವೇಶ ಹಾಗೂ ಗುರಿಕಾರರಿಗೆ ಗೌರವಧನ ವಿತರಣಾ ಸಮಾರಂಭ ಮತ್ತು ಮೊಗವೀರ ಯುವ ಸಂಘಟನೆಯ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಸಮಾರಂಭ ಉದ್ಘಾಟಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ  ಜಿ.ಶಂಕರ್  ಮಾತನಾಡಿ, `ಸಮಾಜವನ್ನು ಮುನ್ನಡೆಸುವ ಕಾರ್ಯ ಗುರಿಕಾರರಿಂದ ಆಗುತ್ತಿದ್ದ, ಅವರಿಗೆ ಸಹಕಾರ ನೀಡಿ ಒಗ್ಗಟ್ಟಿನಲ್ಲಿ ಮುನ್ನಡೆಯಬೇಕು~ ಎಂದರು.

`ಕಳೆದ ಬಾರಿ ಮೊಗವೀರ ಯುವ ಸಂಘಟನೆಯಿಂದ 5ಸಾವಿರ ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಈ ವರ್ಷ 10ಸಾವಿರ ಯುನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದ್ದೇವೆ. ಬೆಂಗಳೂರಿನಲ್ಲೂ 500 ಯುನಿಟ್ ರಕ್ತ ಸಂಗ್ರಹಿಸಿ ರಾಜ್ಯದಲ್ಲಿ ಸಂಘಟನೆ ಗುರುತಿಸುವಂತೆ ಮಾಡಬೇಕು~ ಎಂದರು.

`ಮುಂಬರುವ ದಿನಗಳಲ್ಲಿ  101 ಜೋಡಿಗಳಿಗೆ ಸಾಮೂಹಿಕ ವಿವಾಹ ನೆರವೇರಿಸುವ ಕಾರ್ಯಕ್ರಮ ಆಗಬೇಕಾಗಿದೆ~ ಎಂದರು. ಯಕ್ಷಗಾನ ಕಲಾವಿದ ಸಿರಿಯಾರ ಮಂಜು ನಾಯ್ಕ ದತ್ತಿ ನಿಧಿ ಸ್ಥಾಪಿಸಿ ರೂ.1 ಲಕ್ಷ  ನೀಡುವ ಮೂಲಕ ಯಕ್ಷಗಾನ ಕಲಾರಂಗದ ಮೂಲಕ ಪ್ರತಿ ವರ್ಷ ಪ್ರಶಸ್ತಿಯನ್ನು ನೀಡಲಾಗುವುದು~ ಎಂದು ಅವರು ತಿಳಿಸಿದರು.
`ಸಿಯಾರದ ಸಿರಿ~ ಸ್ಮರಣಸಂಚಿಕೆ ಯನ್ನು ಗ್ರಂಥವನ್ನು ಅವರು  ಬಿಡುಗಡೆಗೊಳಿಸಿದರು.

ಮೊಗವೀರ ಯುವ ಸಂಘಟನೆ ಇದರ ನೂತನ ಪದಾಧಿಕಾರಿಗಳ ಪದಪ್ರದಾನ ನಡೆಯಿತು. ನಿಕಟ ಪೂರ್ವ ಅಧ್ಯಕ್ಷ ಸತೀಶ್ ಎಮ್.ನಾಯ್ಕ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಘಟಕದ ನೂತನ ಅಧ್ಯಕ್ಷ ಜಯ ಕೋಟ್ಯಾನ್ ಅವರಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ನಿರ್ಗಮನ ಅಧ್ಯಕ್ಷ ಸತೀಶ್ ಎಂ. ನಾಯ್ಕ, ನಿರ್ಗಮನ ಪ್ರಧಾನ ಕಾರ್ಯದರ್ಶಿ ಶಿವರಾಮ್ ಕೆ.ಎಂ. ಹಾಗೂ ಅಶೋಕ್ ಕುಂದರ್ ಮತ್ತು ಸಾಧಕರಾದ  ಅನುಷ್ಕಾ ನಾಯ್ಕ, ಕಾರ್ತಿಕ್, ಶರತ್ ಪಿ.ಎಸ್. ಹಾಗೂ ಶುಶ್ರೂಷಕಿ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವರಿಗೆ ಸರ್ಕಾರದಿಂದ ಕೊಡ ಮಾಡುವ ಪ್ರೋತ್ಸಾಹ ಧನ ಬಾಂಡ್ ವಿತರಿಸಲಾಯಿತು. ಗುರಿಕಾರರಿಗೆ ಗೌರವ ಧನವನ್ನು ಹಸ್ತಾಂತರಿಸಲಾಯಿತು.

ಮೊಗವೀರ ಯುವ ಸಂಘಟನೆಯ ನೂತನ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಲಾಲಾಜಿ ಆರ್.ಮೆಂಡನ್, ದಕ್ಷಿಣ ಕನ್ನಡ  ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಕೇಶವ ಕುಂದರ್, ಮಲ್ಪೆ ಉದ್ಯಮಿ ಪ್ರಮೋದ್ ಮಧ್ವರಾಜ್, ಆನಂದ್ ಸಿ.ಕುಂದರ್, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಅಧ್ಯಕ್ಷ ಸುರೇಶ್ ಆರ್.ಕಾಂಚನ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ ಸುವರ್ಣ, ತಿಮ್ಮ ಮರಕಾಲ, ಪ್ರೊ. ಎಂ.ಎಲ್.ಸಾಮಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.