ADVERTISEMENT

₹18.5 ಕೋಟಿ ಕಾಮಗಾರಿಗೆ ಪ್ರಮೋದ್‌ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 7:20 IST
Last Updated 28 ಫೆಬ್ರುವರಿ 2018, 7:20 IST

ಉಡುಪಿ: ನಗರೋತ್ಥಾನ ಯೋಜನೆಯಲ್ಲಿ ಬಿಡುಗಡೆಯಾದ ₹35 ಕೋಟಿ ಅನುದಾನವನ್ನು ಉಡುಪಿ ನಗರದ ಮೂಲ ಸೌಕರ್ಯ ಅಭಿವೃದ್ಧಿಗೆ ಬಳಸಲಾಗಿದೆ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ನಗರದ ವಿವಿಧ ಬಡಾವಣೆಗಳಲ್ಲಿ ₹18.5 ಕೋಟಿ ವೆಚ್ಚದ 27 ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ನಗರದ ಎಲ್ಲ 35 ವಾರ್ಡ್‌ಗಳಲ್ಲಿ ಜನ ಸಂಪರ್ಕ ಸಭೆ ನಡೆಸಿದ ವೇಳೆ ಬಂದ ಬೇಡಿಕೆಗಳು ಹಾಗೂ ಆ ಭಾಗದ ನಗರಸಭಾ ಸದಸ್ಯರ ಆದ್ಯತೆಗಳಿಗೆ ಅನುಗುಣವಾಗಿ ಕಾಮಗಾರಿಯನ್ನು ಆಯ್ಕೆ ಮಾಡಿಕೊಂಡು ಅನುಷ್ಠಾನ ಮಾಡಲಾಗುತ್ತಿದೆ. ಕಾಂಕ್ರಿಟ್ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೂರೈಕೆ ಹಾಗೂ ಒಳ ಚರಂಡಿ ವ್ಯವಸ್ಥೆ ಕಲ್ಪಿಸಲು ಹೆಚ್ಚಿನ ಅನುದಾನ ಖರ್ಚು ಮಾಡಲಾಗಿದೆ ಎಂದರು.

ಗೋಪಾಲಪುರ ವಾರ್ಡಿನ 4ನೇ ಅಡ್ಡ ರಸ್ತೆಯಿಂದ 1ನೇ ಅಡ್ಡ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ, ಕೊಡವೂರು ವಾರ್ಡಿನ ಲಕ್ಷ್ಮಿನಗರ ಗರ್ಡೆ ಎಸ್.ಟಿ.ಕಾಲೊನಿ 6ನೇ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಯಲ್ಲಿ ಚರಂಡಿ ನಿರ್ಮಿಸಿ ಕಾಂಕ್ರೀಟೀಕರಣ, ಕೊಡವೂರು ಕೊಪ್ಪಲತೋಟದಿಂದ ಕೊಡವೂರು ಮುಖ್ಯರಸ್ತೆಯವರೆಗೆ ಆಯ್ದಭಾಗ ಚರಂಡಿ ನಿರ್ಮಿಸಿ ಕಾಂಕ್ರಿಟೀಕರಣಗೊಳಿಸುದು ಮುಂತಾದ ಪ್ರಮುಖ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.

ADVERTISEMENT

ಎಲ್ಲ ಕಾಮಗಾರಿಗಳನ್ನು ಸಮಯದ ಮಿತಿಯೊಳಗೆ ಪೂರ್ಣಗೊಳಿಸಿ ಹಾಗೂ ಗುಣಮಟ್ಟ ಕಾಪಾಡಿಕೊಳ್ಳಿ ಎಂದು ಅಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಸದಸ್ಯರಾದ ಗಣೇಶ್ ನೇರ್ಗಿ, ಪ್ರಶಾಂತ್ ಅಮಿನ್, ಜಾನಕಿ ಗಣಪತಿ ಶೆಟ್ಟಿಗಾರ್, ರಶ್ಮಿತಾ ಬಾಲಕೃಷ್ಣ, ರಮೇಶ್ ಕಾಂಚನ್, ಪ್ರಶಾಂತ್ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.