ಹೆಬ್ರಿ: ನಕ್ಸಲ್ ಪೀಡಿತ ಪ್ರದೇಶವಾಗಿದ್ದ ಕಬ್ಬಿನಾಲೆಯ ಮತ್ತಾವಿನ ಜನರ ಹಲವು ದಶಕಗಳ ಬೇಡಿಕೆಯಾಗಿದ್ದ ಮತ್ತಾವು ಸೇತುವೆ ನಿರ್ಮಾಣಕ್ಕೆ ಸರ್ಕಾರ ₹2 ಕೋಟಿ ಅನುದಾನ ಮಂಜೂರು ಮಾಡಿದೆ.
ಮತ್ತಾವು ಮಂದಿ ಮಳೆಗಾಲದಲ್ಲಿ ತಾತ್ಕಾಲಿಕ ಕಾಲುಸಂಕ ಬಳಸಿ ಹೊಳೆ ದಾಟುತ್ತಿದ್ದರು. ಸುಮಾರು 6 ತಿಂಗಳು ಹೊಳೆ ದಾಟಲು ಹರಸಾಹಸ ಪಡಬೇಕಾಗಿತ್ತು. ಆರೋಗ್ಯ ಹದಗೆಟ್ಟರೆ ಹೊತ್ತುಕೊಂಡು ಸಾಗಬೇಕು. ಬಹುತೇಕರು ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ಮತ್ತಾವಿನ ಕುಟುಂಬಗಳಿಗೆ ಎಲ್ಲವೂ ಹೊರೆಯಾಗಿತ್ತು. ಜೋರು ಮಳೆಯಾದರೆ ವಿದ್ಯಾರ್ಥಿಗಳು ರಜೆ ಮಾಡಬೇಕು.
ಇಲ್ಲಿನ ಜನರು ಕಾಲು ಸಂಕಕ್ಕೆ ಹೆದರಿ ತಮ್ಮ ಮಕ್ಕಳನ್ನು ಹಾಸ್ಟೆಲಿಗೆ ಸೇರಿಸಿದ್ದರು. ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುದಾನ ಮಂಜೂರುಗೊಳಿಸಿದ್ದು ಮತ್ತಾವು ಜನರ ಮುಖದಲ್ಲಿ ನಗು ಮೂಡಿಸಿದೆ.
ಕಳೆದ ನಾಲ್ಕು ದಶಕಗಳಿಂದ ಕಬ್ಬಿನಾಲೆಯ ಮತ್ತಾವಿನಲ್ಲಿ ಸೇತುವೆ ನಿರ್ಮಿಸಿ ಕೊಡಿ ಎಂದು ಮಲೆಕುಡಿಯ ಸಮುದಾಯದವು ನಿರಂತರ ಬೇಡಿಕೆ ಮುಂದಿಟ್ಟಿದ್ದರು.
ವಿದ್ಯುತ್, ರಸ್ತೆ, ಸೇತುವೆ ಮತ್ತಿತರ ಬೇಡಿಕೆ ಮುಂದಿಟ್ಟು ನಕ್ಸಲರು 15 ವರ್ಷಗಳ ಹಿಂದೆ ನಕ್ಸಲ್ ನಿಗ್ರಹ ಪಡೆಯ ಯೋಧರು ಮತ್ತು ಸ್ಥಳೀಯ ಪೊಲೀಸರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿ ಮತ್ತು ಗ್ರೆನೇಡ್ ಎಸೆದು ಪೊಲೀಸ್ ಜೀಪು ಸ್ಫೋಟಿಸಲು ಯತ್ನಿಸಿದ್ದರು. ಅದರಲ್ಲಿ ಹೆಬ್ರಿ ಪೊಲೀಸ್ ಜೀಪು ಸಂಪೂರ್ಣ ಪುಡಿಯಾಗಿ ನಕ್ಸಲ್ ನಿಗ್ರಹ ಪಡೆಯ ಯೋಧರು ಮತ್ತು ಹೆಬ್ರಿ ಪೊಲೀಸರಿಗೆ ಗಂಭೀರ ಗಾಯಗಳಾಗಿತ್ತು.
ಮತ್ತಾವಿನಲ್ಲಿ ಸೇತುವೆ ನಿರ್ಮಿಸಬೇಕೆಂಬುದು 5 ದಶಕಗಳ ಬೇಡಿಕೆಯಾಗಿದ್ದು ಇದು ಮಲೆಕುಡಿಯ ಸಂಘದ ನಿರಂತರ ಹಕ್ಕೊತ್ತಾಯಕ್ಕೆ ಸಂದ ಜಯ. ಕಾಮಗಾರಿಯು ನಿಗದಿತ ಅವಧಿಯಲ್ಲಿ ಪ್ರಾರಂಭ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುತ್ತೇವೆ.ಗಂಗಾಧರ ಗೌಡ, ಅಧ್ಯಕ್ಷ, ಜಿಲ್ಲಾ ಮಲೆಕುಡಿಯ ಸಂಘ
ಆ ಬಳಿಕ ಮತ್ತಾವು ಸೇತುವೆಯ ಬೇಡಿಕೆ ಮುಂಚೂಣಿಗೆ ಬಂದಿತ್ತು. ಅಂದಿನ ಶಾಸಕರು 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಬಳಸಿ ಹ್ಯಾಮ್ಲೇಟ್ ಯೋಜನೆಯ ಮೂಲಕ ಕತ್ತಲೆಯಲ್ಲಿದ್ದ ಮತ್ತಾವಿಗೆ ಬೆಳಕು ನೀಡಿದ್ದರು.
ಮತ್ತಾವು ಸೇತುವೆ ವಿಚಾರವಾಗಿ 15 ವರ್ಷಗಳಿಂದ ‘ಪ್ರಜಾವಾಣಿ’ಯಲ್ಲಿ ಹಲವು ವಿಶೇಷ ವರದಿಗಳು ಪ್ರಕಟಗೊಂಡಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳ ಗಮನ ಸೆಳೆದಿತ್ತು.
‘ಶೀಘ್ರ ಕೆಲಸ ಮುಗಿಸುವಂತೆ ಸೂಚಿಸಲಾಗುವುದು’
ಹೆಬ್ರಿ ತಾಲ್ಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಾವು ಪ್ರದೇಶದ ಅರಣ್ಯದಂಚಿನ ಮಲೆಕುಡಿಯ ಸಮುದಾಯದ ನಿವಾಸಿಗಳ ಕಾಲೊನಿ ಸಂಪರ್ಕಕ್ಕಾಗಿ ಸೇತುವೆಯ ನಿರ್ಮಾಣಕ್ಕೆ ₹2 ಕೋಟಿ ಅನುದಾನ ಮಂಜೂರಾಗಿದೆ. ಟೆಂಡರ್ ಮುಗಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ವರ್ಷದಲ್ಲಿ ಕೆಲಸ ಮಗಿಸುವಂತೆ ಸೂಚಿಸಲಾಗುವುದು ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ತಿಳಿಸಿದರು.
ಇಲ್ಲಿಯ ಜನರ ಕಷ್ಟಗಳನ್ನು ಅರಿತುಕೊಂಡಿದ್ದೇನೆ. ಹಿಂದೊಮ್ಮೆ ಅನುದಾನ ಮಂಜೂರಾದಾಗ ಅನೇಕ ಕಾರಣಗಳಿಂದ ಸೇತುವೆ ನಿರ್ಮಾಣ ಆಗಲಿಲ್ಲ. ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಿ ಮತ್ತೊಮ್ಮೆ ಸೇತುವೆಯ ನಿರ್ಮಾಣಕ್ಕೆ ಅನುದಾನ ತರಲಾಗಿದೆ. ಮುಂದಿನ ದಿನಗಳಲ್ಲಿ ಮಲೆಕುಡಿಯ ಸಮುದಾಯದ ಸುಗಮ ಸಂಚಾರಕ್ಕೆ ಅವಕಾಶ ದೊರೆಯಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.