ADVERTISEMENT

ಪಡುಬಿದ್ರಿ | ಗ್ರಾಮ ಜಲಾವೃತ: 24 ಮಂದಿ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 16:29 IST
Last Updated 1 ಆಗಸ್ಟ್ 2024, 16:29 IST
ಕಾಪು ತಾಲ್ಲೂಕಿನಲ್ಲಿ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು
ಕಾಪು ತಾಲ್ಲೂಕಿನಲ್ಲಿ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು   

ಪಡುಬಿದ್ರಿ: ಕಳೆದ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಕಾಪು ತಾಲ್ಲೂಕಿನಲ್ಲಿ ಕೆಲವು ಗ್ರಾಮಗಳು ಜಲಾವೃತವಾಗಿ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

ಕಾಪು ತಾಲ್ಲೂಕಿನ ಪಡುಬಿದ್ರಿ, ಕಾಪು, ಶಿರ್ವ, ಕಟಪಾಡಿ ಪರಿಸರದಲ್ಲಿ ಮಳೆಯಿಂದ ಕೆಲವು ಪ್ರದೇಶಗಳು ಜಲಾವೃತಗೊಂಡವು. ಗೃಹ ರಕ್ಷಕದಳದ ಸಿಬ್ಬಂದಿ ಜೊತೆ ಬೋಟ್‌ನಲ್ಲಿ ನೆರೆ ಪೀಡಿತ ಪ್ರದೇಶಕ್ಕೆ ತೆರಳಿದ ತಹಶೀಲ್ದಾರ್ ಪ್ರತಿಭಾ, ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದರು. ಒಟ್ಟು 24 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸ್ಥಳಾಂತರಿಸಿದವರು ಯಾರೂ ಕಾಳಜಿ ಕೇಂದ್ರಕ್ಕೆ ತೆರಳದೆ ಅವರವರ ಸಂಬಂಧಿಕರ ಮನೆಗೆ ತೆರಳಿದರು.

ADVERTISEMENT

ಫಲಿಮಾರು ಗ್ರಾಮದ ಕೊಪ್ಪಳ ಎಂಬಲ್ಲಿ ಗೋಪಾಲ ಅವರ ಮನೆಯ ಐವರು, ಯೇಣಗುಡ್ಡೆಯ ಫಾರೆಸ್ಟ್‌ಗೇಟ್ ಬಳಿಯ ನಾಗಿ ಎಂಬುವರ ಮನೆಯ ಐವರು, ಶಿರ್ವದ ಪಂಜಿಮಾರು ಪ್ರದೇಶದ ಹಿಲ್ಡಾ ರೋಡ್ರಿಗಸ್ ಕುಟುಂಬದ ಇಬ್ಬರು, ಶಿರ್ವ ಮಾರಿಗುಡಿ ಸೇತುವೆ ಬಳಿಯ ಜಯಶ್ರೀ ಕುಟುಂಬದ ಮೂವರು , ಬೆಳ್ಳೆ ಗ್ರಾಮದ ಪಡುಬೆಳ್ಳೆಯ ಭಟ್ಟ ಸಾಲಿನಲ್ಲಿ ಜಲಾವೃತಗೊಂಡಿದ್ದ ತುಕ್ರ ಮುಖಾರಿ ಮನೆಯ ಒಂಬತ್ತು ಸದಸ್ಯರನ್ನು ಸುರಕ್ಷಿತವಾಗಿ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಯಿತು.

ನೆರೆ ಸಂಕಷ್ಟ ಎದುರಾದಲ್ಲಿ ತಹಶೀಲ್ದಾರ್ ಕಚೇರಿಯ ಕಂಟ್ರೋಲ್ ರೂಂಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ತಹಶಿಲ್ದಾರ್ ಪ್ರತಿಭಾ ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.