ADVERTISEMENT

432 ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ

ಉಡುಪಿಯಲ್ಲಿ ಮೀನುಗಾರಿಕೆ, ಕ್ರೀಡಾ ಸಚಿವ ಪ್ರಮೋದ್ ಭರವಸೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 6:25 IST
Last Updated 16 ಆಗಸ್ಟ್ 2016, 6:25 IST
ಉಡುಪಿ ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಪ್ರಮೋದ್ ಮಧ್ವರಾಜ್ ಧ್ವಜ ವಂದನೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಇದ್ದಾರೆ (ಎಡಚಿತ್ರ). ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆಯ ತಂಡದವರು ನಡೆಸಿದ ಪಥ ಸಂಚಲನ ಗಮನ ಸೆಳೆಯಿತು.  ಪ್ರಜಾವಾಣಿ ಚಿತ್ರ
ಉಡುಪಿ ನಗರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಪ್ರಮೋದ್ ಮಧ್ವರಾಜ್ ಧ್ವಜ ವಂದನೆ ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ ಇದ್ದಾರೆ (ಎಡಚಿತ್ರ). ಸಮಾರಂಭದಲ್ಲಿ ಸಶಸ್ತ್ರ ಮೀಸಲು ಪಡೆಯ ತಂಡದವರು ನಡೆಸಿದ ಪಥ ಸಂಚಲನ ಗಮನ ಸೆಳೆಯಿತು. ಪ್ರಜಾವಾಣಿ ಚಿತ್ರ   

ಉಡುಪಿ: ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವಂತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತೆ ಉತ್ತಮ ಆಡಳಿತ ನೀಡಲಾಗುವುದು. ಸಂವಿಧಾನದ ಆಶಯಗಳನ್ನು ಕಾರ್ಯ ಗತಗೊಳಿಸಲಾಗುವುದು ಎಂದು ಮೀನುಗಾರಿಕೆ ಹಾಗೂ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದರು.

ನಗರದ ಬೀಡಿನಗುಡ್ಡೆಯನ ಬಯಲು ರಂಗಮಂದಿರದಲ್ಲಿ ಸೋಮ ವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಬಿಪಿಎಲ್ ಕಾರ್ಡ್ ನೀಡಲು ಈ ಹಿಂದೆ ಕಠಿಣ ನಿಯಮಗಳನ್ನು ಪಾಲಿಸಲಾಗುತ್ತಿತ್ತು. ಆದರೆ, ಅದನ್ನು ಈಗ ಸರಳಗೊಳಿಸಿ ಕೇವಲ ನಾಲ್ಕು ಮಾನದಂಡ ನಿಗದಿ ಪಡಿಸಲಾಗಿದೆ. ಅರ್ಹರು ಕಾರ್ಡ್‌ ಪಡೆ ಯಲು ಇದರಿಂದ ಅನುಕೂಲವಾಗಲಿದೆ. ಶಾಲಾ– ಕಾಲೇಜುಗಳ ದಾಖಲಾತಿ ಸಂದರ್ಭದಲ್ಲಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸುಲಭವಾಗಿ ಲಭ್ಯವಾಗು ವಂತೆ ಕೌಂಟರ್‌ನಲ್ಲಿಯೇ (ಒಟಿಸಿ) ಎಲ್ಲ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಣ್ಣ– ಪುಟ್ಟ ದಾಖಲೆ ಪತ್ರಗಳನ್ನು ಪಡೆಯಲು ಜನರು ತಾಲ್ಲೂಕು ಕಚೇರಿಗೆ ಅಲೆದಾಡುವಂತಹ ಪರಿಸ್ಥಿತಿ ಈ ಹಿಂದೆ ಇತ್ತು. ಇದಕ್ಕೆ ಅಂತ್ಯ ಹಾಡಲು ಜಿಲ್ಲೆಯ 158 ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಾಪೂಜಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಜನರು ಇಲ್ಲಿಂದ ಸುಲಭವಾಗಿ ದಾಖಲೆಗಳನ್ನು ಪಡೆದು ಕೊಳ್ಳಬಹುದು. ಪಹಣಿ ದೋಷಗಳನ್ನು ತ್ವರಿತಗತಿಯಲ್ಲಿ ಸರಿಪಡಿಸಲು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 623 ಕಂದಾಯ ಅದಾಲತ್ ನಡೆಸಲಾಗಿದೆ. ಒಟ್ಟು 30,710 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.

ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಇಲಾಖೆಯು ನಡೆಸುವ ವಿದ್ಯಾರ್ಥಿ ನಿಲಯದ ನಿರ್ವಹಣೆಗಾಗಿ ₹ 7.90 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಜುಲೈ ಅಂತ್ಯದ ವರೆಗೆ ₹ 1.46 ಕೋಟಿ ಅನುದಾನ ಖರ್ಚಾಗಿದೆ. ವಿದ್ಯಾಸಿರಿ ಯೋಜನೆಯ ಫಲಾನುಭವಿಗಳಿಗೆ ಜುಲೈ ಅಂತ್ಯದ ವರೆಗೆ ₹ 2.15 ಕೋಟಿ ವಿತರಿಸಲಾಗಿದೆ. ಅಲ್ಪಸಂಖ್ಯಾತರ ಕಾಲೋನಿಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ₹ 100 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಪ್ರವಾಸೋದ್ಯಮಕ್ಕೂ ಒತ್ತು ನೀಡಲಾಗಿದ್ದು ಕೃಷ್ಣ ಮಠದ ಸಮೀಪ ಪ್ರವಾಸಿಗರಿಗೆ ಅನುಕೂಲಕ್ಕಾಗಿ ₹ 44 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಮಾಡಲಾಗಿದೆ. 53 ಮಂದಿ ನಿರುದ್ಯೋ ಗಿಗಳಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ₹ 2 ಲಕ್ಷ ಸಹಾಯ ಧನ  ನೀಡಲಾಗಿದೆ. ಜಿಲ್ಲೆಯ ಪ್ರಮುಖ ಕೂಡು ರಸ್ತೆಗಳನ್ನು ಅಭಿವೃದ್ಧಿಪಡಿಸಲು ₹6.25 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗು ತ್ತಿದ್ದು ‘ಕೃಷಿ ಯಂತ್ರಧಾರೆ ಯೋಜನೆ’ಯ ಮೂಲಕ ಕೃಷಿ ಯಂತ್ರಗಳನ್ನು ಬಾಡಿಗೆ ನೀಡಲಾಗುತ್ತಿದೆ. ವಿವಿಧ ಬಗೆಯ ಕೃಷಿ ಯಂತ್ರಗಳನ್ನು ಖರೀದಿಸಲು ₹ 1.40 ಕೋಟಿ ಅನುದಾನ ನೀಡಲಾಗಿದೆ. ವೈಯಕ್ತಿಕವಾಗಿ ಯಂತ್ರೋಪಕರಣ ಖರೀದಿ ಮಾಡುವವರಿಗೆ ಸಹ ಸಹಾಯ ಧನ ನೀಡಲಾಗುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಮೂಲಕ 2015–16ನೇ ಸಾಲಿನಲ್ಲಿ ₹36.70 ಕೋಟಿ ವೆಚ್ಚದಲ್ಲಿ 37 ಕಿಂಡಿ ಅಣ್ಣೆಕಟ್ಟು ನಿರ್ಮಾಣ ಮಾಡಲಾಗಿದೆ. ಈ ವರ್ಷ ಸಹ 27 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

198 ಹೊಸ ಯಾಂತ್ರೀಕೃತ ದೋಣಿಗಳ ನಿರ್ಮಾಣಕ್ಕೆ ಕಳೆದ ವರ್ಷ ಸಾಧ್ಯತಾ ಪ್ರಮಾಣ ಪತ್ರ ನೀಡಲಾಗಿದೆ. ದೋಣಿ ನಿರ್ಮಾಣ ಮಾಡಲು ಈ ಹಿಂದೆ ನಿಗದಿಪಡಿಸಿದ್ದ 1 ವರ್ಷದ ಅವಧಿಯನ್ನು ಎರಡು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್, ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ, ಜಿಲ್ಲಾಧಿಕಾರಿ ಟಿ. ವೆಂಕಟೇಶ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ಅನುರಾಧಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಉಪಸ್ಥಿತರಿದ್ದರು.

ನಾಡಗೀತೆ ಹಾಡುವಾಗ ಜೀಪ್‌ ಏರಲು ಹೊರಟ ಸಚಿವ
ಧ್ವಜಾರೋಹಣ ಮಾಡಿದ ಸಚಿವ ಪ್ರಮೋದ್ ಮಧ್ವರಾಜ್ ಅವರು ನಾಡಗೀತೆ ಹಾಡುತ್ತಿರುವಾಗಲೇ ಜೀಪ್‌ ಏರಲು ಹೊರಟ ಪ್ರಸಂಗ ನಡೆಯಿತು.

ಧ್ವಜಾರೋಹಣದ ನಂತರ ರಾಷ್ಟ್ರಗೀತೆ ಹಾಡಲಾಯಿತು. ಇನ್ನೇನು ನಾಡಗೀತೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಜೀಪ್‌ ಬಂತು. ವಾಹನವನ್ನು ನೋಡಿದ ಸಚಿವರ ನಾಡಗೀತೆ ಆರಂಭವಾದರೂ ಅದನ್ನು ಗಮನಿಸದೆ ಜೀಪ್‌ನತ್ತ ಹೆಜ್ಜೆ ಹಾಕಿದರು. ಇದನ್ನು ನೋಡಿದ ಇನ್‌ಸ್ಪೆಕ್ಟರ್‌ ಜೈಶಂಕರ್‌ ಹಾಗೂ ಇತರ ಇಲಾಖೆಗಳ ಸಿಬ್ಬಂದಿ ಸಚಿವರಿಗೆ ನಾಡಗೀತೆಯ ವಿಷಯ ತಿಳಿಸಿದರು. ಅಲ್ಲಿಯೇ ನಿಂತ ಸಚಿವರು ನಾಡಗೀತೆ ಮುಗಿದ ನಂತರ ಜೀಪ್ ಏರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT