ADVERTISEMENT

ಕಾನೂನು ಉಲ್ಲಂಘಿಸುವ ಖಾಸಗಿ ಬಸ್ ವಿರುದ್ಧ ಕ್ರಮ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 7:07 IST
Last Updated 20 ಜನವರಿ 2018, 7:07 IST

ಉಡುಪಿ: ಖಾಸಗಿ ಬಸ್ ಮಾಲೀಕರ ಸಭೆ ಕರೆದು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗುತ್ತದೆ. ಒಂದು ವಾರದ ನಂತರವೂ ಸರಿ ಹೋಗದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಎಚ್ಚರಿಕೆ ನೀಡಿದರು.

ಸಾರ್ವಜನಿಕರ ಅಹವಾಲು ಆಲಿಸುವ ಫೋನ್ ಇನ್ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ಕರ್ಕಶ ಹಾರ್ನ್ ಸೇರಿದಂತೆ ಹಲವು ನಿಯಮಗಳನ್ನು ಖಾಸಗಿ ಬಸ್ ಚಾಲಕರು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅವರೊಂದಿಗೆ ಸಭೆ ನಡೆಸಿ ತಿಳಿವಳಿಕೆ ನೀಡಲಾಗುತ್ತದೆ. ಆ ನಂತರವೂ ಮುಂದುವರೆದರೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದರು.

ಕರೆ ಮಾಡಿದ ಮಹಿಳೆಯೊಬ್ಬರು ಅಪ್ರಾಪ್ತರು ವಾಹನ ಚಾಲನೆ ಮಾಡುತ್ತಿರುವ ಬಗ್ಗೆ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸರಳ ಕಾನೂನುಗಳ ಬಗ್ಗೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ದಿನ ನಿತ್ಯದಲ್ಲಿ ಬಳಕೆಯಲ್ಲಿರುವ ಕಾನೂನಿನ ಬಗ್ಗೆ ಜನರಿಗೆ ಮಾಹಿತಿ ನೀಡುವ ಅಗತ್ಯವಿದೆ. ಶಾಲೆಗಳಲ್ಲಿ ಕಾರ್ಯಕ್ರಮ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ADVERTISEMENT

ಮಟ್ಕಾ ದಂಧೆಯ ಬಗ್ಗೆ ನಾಲ್ಕು ದೂರುಗಳು ಬಂದವು. ಮಟ್ಕಾ ದಂಧೆ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಪರ್ಯಾಯದಂತಹ ಕಾರ್ಯಕ್ರಮ ಇದ್ದರೂ ಕಳೆದ ವಾರ 13 ಪ್ರಕರಣ ದಾಖಲಿಸಿ 13 ಮಂದಿಯನ್ನು ಬಂಧಿಸಲಾಗಿದೆ. ಹಿಂದಿನ ಎಸ್ಪಿ ಅವರು ಕೆಲವರನ್ನು ಗಡಿಪಾಡು ಮಾಡಲು ಶಿಫಾರಸ್ಸು ಮಾಡಿದ್ದಾರೆ. ಆ ಪ್ರಕ್ರಿಯೆ ಮುಂದುವರೆಯುತ್ತದೆ. ದಂಧೆಕೋರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

ಪೋಷಕರು ಮಕ್ಕಳ ಕಾಳಜಿ ವಹಿಸಬೇಕು

ಆಟೊ ರಿಕ್ಷಾಗಳಲ್ಲಿ ಅಧಿಕ ಸಂಖ್ಯೆಯ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿರುವ ದೂರಿನ ಬಗ್ಗೆ ಮಾತನಾಡಿದ ಎಸ್ಪಿ ಅವರು, ಇಲ್ಲಿ ಪೋಷಕರ ಪಾತ್ರ ಮುಖ್ಯವಾಗುತ್ತದೆ ಹಾಗೂ ಅವರೇ ಹೆಚ್ಚಿನ ಕಾಳಜಿ ವಹಿಸಬೇಕು. ಅಧಿಕ ಮಕ್ಕಳನ್ನು ಕರೆದೊಯ್ಯವ ವಾಹನಗಳಲ್ಲಿ ಅವರು ತಮ್ಮ ಮಕ್ಕಳನ್ನು ಕಳುಹಿಸಬಾರದು. ಶಾಲೆಗಳು ಸಹ ಇಂತಹ ವಿಷಯಗಳನ್ನು ಸೂಕ್ಷ್ಮವಾಗಿ ನೋಡಬೇಕು. ಪೊಲೀಸರು ಸಹ ತಮ್ಮ ಕರ್ತವ್ಯ ನಿರ್ವಹಿಸುವರು ಎಂದರು.

ಹಿಂದಿನ ವಾರದ ಫೋನ್ ಇನ್ ಕಾರ್ಯಕ್ರಮದಲ್ಲ ಕೇಳಿ ಬಂದ ದೂರುಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. 13 ಮಟ್ಕಾ, 3 ಜೂಜಾಟ, ಮಾದಕ ವಸ್ತು ಕಾಯ್ದೆ 3, ಸಿಗರೇಟು ಮತ್ತು ಇತರ ತಂಬಾಕು ಪದಾರ್ಥ ನಿಷೇಧ ಕಾಯ್ದೆ 30, ಪಾನಮತ್ತ ಚಾಲನೆ 6, ಕರ್ಕಶ ಹಾರ್ನ್ 14, ಹೆಲ್ಮೆಟ್ ಇಲ್ಲದೆ ಚಾಲನೆ, ನೋ ಪಾರ್ಕಿಂಗ್ ನಿಲುಗಡೆ ಸೇರಿ ಸುಮಾರು 800 ಪ್ರಕರಣಗಳನ್ನು ಮೋಟಾರು ವಾಹನ ಕಾಯ್ದೆ ಅನ್ವಯ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.