ADVERTISEMENT

₹ 57 ಕೋಟಿ ವೆಚ್ಚದ ನೀರಿನ ಯೋಜನೆ

25 ವರ್ಷದವರಿಗೆ ಸಮಸ್ಯೆ ಬಾರದು: ವಿನಯಕುಮಾರ್‌ ಸೊರಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 11:50 IST
Last Updated 2 ಮಾರ್ಚ್ 2018, 11:50 IST

ಉಡುಪಿ: ಕಾಪು ಪುರಸಭೆ ವ್ಯಾಪ್ತಿ ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ₹57 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗಿದ್ದು, ಸಚಿವ ಸಂಪುಟ ಸಹ ಅನುಮೋದನೆ ನೀಡಿದೆ ಎಂದು ಕಾಪು ಶಾಸಕ ವಿನಯ ಕುಮಾರ ಸೊರಕೆ ಹೇಳಿದರು.

ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆ ಜಾರಿ ಮಾಡಲಾಗುತ್ತಿದೆ. ಅದು ಅನುಷ್ಠಾನವಾದರೆ ಕುರ್ಕಾಲು, ಇನ್ನಂಜೆ, ಮೂಡಬೆಟ್ಟು, ಮಜೂರು ಗ್ರಾಮಗಳಿಗೆ ನಿರಂತರ ನೀರು ಪೂರೈಕೆ ಮಾಡಬಹುದು ಎಂದು ಹೇಳಿದರು.

ಶಾಂಭವಿ ನದಿಯಿಂದ ನೀರೆತ್ತಿ ಪಲಿಮಾರು ಆಸುಪಾಸಿನ 10 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಚಾಂತಾರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೂ ಕೆಲವೇ ದಿನಗಳಲ್ಲಿ ಅನುಮೋದನೆ ಸಿಗಲಿದೆ. ಈ ಯೋಜನೆಗಳು ಜಾರಿಗೊಂಡರೆ ಕಾಪು ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದರು.

ADVERTISEMENT

ಬೇಸಿಗೆ ಆರಂಭವಾಗಿದ್ದು ಇನ್ನೇನು ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಲಿದೆ. ಗ್ರಾಮೀಣ ಭಾಗದ ಜನರಿಗೆ ನೀರಿನ ತೊಂದರೆ ಆಗದಂತೆ ಈಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈಗಾಗಲೇ ಕೈಗೊಂಡಿರುವ ಕುಡಿಯುವ ನೀರಿನ ಯೋಜನೆ ಪೂರ್ಣ ಗೊಳಿಸಬೇಕು. ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದ್ದರೂ ಕೆಲವರು ಈ ವರೆಗೆ ಕಾಮಗಾರಿ ಆರಂಭಿಸಿಲ್ಲ. ಅಂತಹವರ ಪಟ್ಟಿ ತಯಾರಿಸಿ ಮಂಜೂರಾತಿ ರದ್ದುಪಡಿಸಿ. ತಾಂತ್ರಿಕ ದೋಷಗಳಿಂದಾಗಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರೆ ವಸತಿ ನಿಗಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ವಾರದಲ್ಲಿ 500 ಬಿಪಿಎಲ್ ಕಾರ್ಡ್‌ ವಿತ ರಣೆ ಮಾಡಲಾಗುವುದು. ಪಂಚಾ ಯಿತಿಯಲ್ಲಿಯೇ ಫಲಾನು ಭವಿಗಳಿಗೆ ಕಾರ್ಡ್ ವಿತರಿಸುವ ಅಭಿಯಾನ 9ರ ವರೆಗೆ ನಡೆಯಲಿದೆ. ಆದಾಯ ದೃಢೀಕರಣ ಪತ್ರ, ಆಧಾರ್ ನೀಡಿ ನಿಗದಿತ ದಿನದಂದು ಹಾಜರಾಗಿ ಕಾರ್ಡ್‌ ಪಡೆದುಕೊಳ್ಳಬಹುದು ಎಂದರು.

ಕಾಪು ಉಪವಿಭಾಗಕ್ಕೆ ಸಂಬಂಧಿಸಿ ದಂತೆ ಮುಂದಿನ 10 ವರ್ಷಗಳಲ್ಲಿ ನಿರ್ವಹಿಸಬೇಕಾಗಿರುವ 287 ಸುಧಾರಣಾ ಕಾಮಗಾರಿಗಳಿಗೆ ₹41.5 ಕೋಟಿ ವೆಚ್ಚದ ಪ್ರಸ್ತಾವನೆ ಈಗಾಗಲೇ ಸಲ್ಲಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿ ಹೇಳಿದರು. ಪೆರ್ಡೂರು ಮತ್ತು ಕುಕ್ಕೆಹಳ್ಳಿ ಶಾಖೆಗಳಲ್ಲಿ ಹೊಸದಾಗಿ ಒಂದೊಂದು ಉಪವಿಭಾಗವನ್ನು ಆರಂಭಿಸುವ ಆವಶ್ಯಕತೆಯಿದೆ ಎಂದರು.
***
ನೀರಿನ ಅಭಾವ ಎದುರಾಗುವ ಗ್ರಾಮಗಳ ಪಿಡಿಒಗಳು ಟ್ಯಾಂಕರ್ ಅಥವಾ ಪೈಪ್‌ಲೈನ್ ಮೂಲಕ ನೀರು ಪೂರೈಕೆ ಮಾಡಲು ₹5.5 ಲಕ್ಷ ವೆಚ್ಚದ ಅಂದಾಜು ಪಟ್ಟಿ ತಯಾರಿಸಿ ನೀಡಿ.

–ವಿನಯ ಕುಮಾರ್ ಸೊರಕೆ,  ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.