
ಸಾವು
(ಪ್ರಾತಿನಿಧಿಕ ಚಿತ್ರ)
ಉಡುಪಿ: ‘ಕಾರ್ಕಳದ ಬೆಳ್ಮಣ್‌ನ ಲಾಡ್ಜೊಂದರಲ್ಲಿ ಈಚೆಗೆ ಅಭಿಷೇಕ್ ಆಚಾರ್ಯ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿ ಅಭಿಷೇಕ್ ಅವರ ಫೋನ್‌ನ ವಿವರವಾದ ಪರಿಶೀಲನೆಗಾಗಿ ಅದನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ
‘ಫೋನ್ ಡೇಟಾ, ಬ್ಯಾಂಕ್ ವ್ಯವಹಾರಗಳು, ಚಾಟ್ ದಾಖಲೆಗಳ ಆಧಾರದ ಮೇಲೆ ಆರೋಪಿಗಳನ್ನು ವಿಚಾರಣೆ ಮಾಡಲಾಗಿದೆ. ಆರೋಪಿಗಳ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲಾಗಿದೆ. ಮೃತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಮತ್ತು ನಿಕಟವರ್ತಿಗಳನ್ನೂ ವಿಚಾರಣೆ ಮಾಡಲಾಗಿದೆ’ ಎಂದಿದ್ದಾರೆ.
‘ಈವರೆಗೆ ನಡೆಸಿರುವ ತನಿಖೆಯಲ್ಲಿ ಹನಿಟ್ರ್ಯಾಪ್ ನಡೆದಿರುವುದಕ್ಕೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ.ಆರೋಪಿ ಯುವತಿಯ ಫೋನ್‌ನಲ್ಲಿ ಅಶ್ಲೀಲ ಫೋಟೊ ಅಥವಾ ವಿಡಿಯೊಗಳು ಸಿಕ್ಕಿಲ್ಲ ಮತ್ತು ಆಕೆ ಯಾರಿಗೂ ಯಾವುದೇ ವಿಡಿಯೋಗಳನ್ನು ಕಳುಹಿಸಿರುವುದು ಕಂಡು ಬಂದಿಲ್ಲ’ ಎಂದೂ ವಿವರಿಸಿದ್ದಾರೆ.
‘ಸೆಪ್ಟೆಂಬರ್‌ನಲ್ಲಿ ಅಭಿಷೇಕ್ ಅವರು ಯುವತಿಗೆ ವರ್ಗಾಯಿಸಿದ ಹಣವನ್ನು ಆಕೆ ಅದೇ ದಿನ ಹಿಂದಿರುಗಿಸಿದ್ದಾರೆ.ಆತ್ಮಹತ್ಯೆಗೆ ಮೊದಲು, ಅಭಿಷೇಕ್ ಅವರು ಆರೋಪಿ ಯುವತಿಯ ಅಶ್ಲೀಲ ವಿಡಿಯೋಗಳನ್ನು ಆಸ್ಪತ್ರೆಯ ಸಹೋದ್ಯೋಗಿಗಳ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದರು. ಈ ಕುರಿತು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಯುವತಿ ಅಭಿಷೇಕ್‌ಗೆ ತಿಳಿಸಿದ್ದರು’ ಎಂದು ಹೇಳಿದ್ದಾರೆ.
‘ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊಗಳನ್ನು ಆರೋಪಿ ಯುವತಿಯ ಸ್ನೇಹಿತೆಯೇ ರೆಕಾರ್ಡ್ ಮಾಡಿಕೊಂಡಿದ್ದಾಳೆ ಮತ್ತು ಅದನ್ನು ವೈಯಕ್ತಿಕವಾಗಿ ವಾಟ್ಸಪ್‌ನಲ್ಲಿ ಆ ಯುವತಿಗೆ ಕಳುಹಿಸಿದ್ದಾಳೆ. ಆದರೆ ಅಭಿಷೇಕ್ ಅವರು ಆಕೆಯ ವಾಟ್ಸಪ್‌ಗೆ ಪ್ರವೇಶ ಪಡೆದು ಆ ವಿಡಿಯೋಗಳನ್ನು ನೋಡಿದ್ದಾರೆ’ ಎಂದೂ ತಿಳಿಸಿದ್ದಾರೆ.
‘ಡ್ರೆಸ್ ಚೇಂಜ್ ವಿಡಿಯೋವನ್ನು ಯಾಕೆ ರೆಕಾರ್ಡ್ ಮಾಡಿದ್ದರು ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಆ ವಿಡಿಯೋ ದುರುಪಯೋಗವಾಗಿದೆಯೋ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ. ಅಭಿಷೇಕ್ ಡೆತ್‌ನೋಟ್‌ನ ಕೈಬರಹದ ಪರಿಶೀಲನೆ ನಡೆಯುತ್ತಿದೆ. ಪ್ರಕರಣದ ತನಿಖೆ ಮುಂದುವರಿದಿದೆ’ ಎಂದೂ ಹೇಳಿದ್ದಾರೆ.
‘ಅಭಿಷೇಕ್ ಆಚಾರ್ಯ ಅವರನ್ನು ತಂಡವೊಂದು ಹನಿಟ್ಯಾಪ್ ಮಾಡಿದ್ದು, ಈ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವಕರ್ಮ ಯುವ ಮಿಲನ ಸಂಘಟನೆ ಈಚೆಗೆ ಆಗ್ರಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.