ADVERTISEMENT

ಉಡುಪಿ | ಬಿಲ್ಲವ ಸಂಘದ ನಿಂದನೆ: ಎಸ್‌ಪಿಗೆ ದೂರು

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 13:42 IST
Last Updated 24 ಜನವರಿ 2024, 13:42 IST
ಬಿಲ್ಲವ ಸೇವಾ ಸಂಘವನ್ನು ಅವಾಚ್ಯವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಡುಪಿ ಬಿಲ್ಲವರ ಸೇವಾ ಸಂಘ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರಿಗೆ ದೂರು ಸಲ್ಲಿಸಿತು.
ಬಿಲ್ಲವ ಸೇವಾ ಸಂಘವನ್ನು ಅವಾಚ್ಯವಾಗಿ ನಿಂದಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಡುಪಿ ಬಿಲ್ಲವರ ಸೇವಾ ಸಂಘ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಅವರಿಗೆ ದೂರು ಸಲ್ಲಿಸಿತು.   

ಉಡುಪಿ: ಅಯೋಧ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠೆ ನಡೆದ ದಿನ ಬನ್ನಂಜೆಯ ನಾರಾಯಣಗುರು ಮಂದಿರದಲ್ಲಿ ಧ್ವಜ ಹಾಕಲಿಲ್ಲ ಎಂದು ಅವಾಚ್ಯವಾಗಿ ನಿಂದಿಸಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಡುಪಿ ಬಿಲ್ಲವರ ಸೇವಾ ಸಂಘ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅರುಣ್ ಅವರಿಗೆ ದೂರು ಸಲ್ಲಿಸಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶಗಳಿಗೆ ಬದ್ಧರಾಗಿ ಹಿರಿಯರ ಆಶಯಗಳಿಗೆ ಪೂರಕವಾಗಿ ಬನ್ನಂಜೆ ಬಿಲ್ಲವ ಸೇವಾ ಸಂಘ ಸಾಮಾಜಿಕ ನ್ಯಾಯದಡಿ ಕಾರ್ಯಗಳನ್ನು ಮಾಡುತ್ತಿದೆ. ‘ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು’ ಎಂಬ ಸಂದೇಶದಂತೆ ಬೇಧ–ಭಾವ ತೋರದೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ.

ಆದರೆ, ಕಿಡಿಗೇಡಿಯೊಬ್ಬ ಬಿಲ್ಲವ ಸಮಾಜವನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಕ್ಷೇಪಾರ್ಹ ವಿಡಿಯೊವನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿರುವುದು ಖಂಡನೀಯ. ಬ್ರಹ್ಮಶ್ರೀ ನಾರಾಯಣ ಗುರುಗಳ ಮಂದಿರದಲ್ಲಿ ನಿತ್ಯವೂ ಪೂಜಾದಿ ವಿಶೇಷ ಸೇವೆಗಳು ನಡೆಯುತ್ತಿದ್ದು ರಾಮನ ಪ್ರಾಣ ಪ್ರತಿಷ್ಠೆ ನಡೆದ ದಿನವೂ ಮಂದಿರದಲ್ಲಿ ಪೂಜೆ ನಡೆಸಲಾಗಿದೆ.

ADVERTISEMENT

ಆದರೂ ಪೂರ್ವಾಗ್ರಹ ಪೀಡಿತನಾಗಿ ಬಿಲ್ಲವ ಸಂಘದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಿಡಿಗೇಡಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ನಿಯೋಗದಲ್ಲಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಕಾರ್ಯದರ್ಶಿ ಶಶಿಧರ್ ಎಂ.ಅಮೀನ್, ಕೋಶಾಧಿಕಾರಿ ಗೋಪಾಲ ಪೂಜಾರಿ, ಸಮಾಜದ ಮುಖಂಡರಾದ ಆನಂದ ಪೂಜಾರಿ, ಕೃಷ್ಣ ಅಂಚನ್, ಉದಯ ಪೂಜಾರಿ, ಪೂರ್ಣಿಮಾ ಎಸ್.ಅಂಚನ್, ಗಿರಿರಾಜ್ ಪೂಜಾರಿ, ರಾಜು ಪೂಜಾರಿ ಉಪ್ಪೂರು, ಗಣೇಶ್ ಕೋಟ್ಯಾನ್ ಗುಂಡಿಬೈಲು, ಗೋವರ್ಧನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.