ADVERTISEMENT

ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 1 ಕೆ.ಜಿ ಅಕ್ಕಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 22:55 IST
Last Updated 3 ಜನವರಿ 2023, 22:55 IST
   

ಬೆಂಗಳೂರು: ‘ಅನ್ನಭಾಗ್ಯ’ ಯೋಜನೆಯ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ವಿತರಿಸಲಾಗುತ್ತಿರುವ 5 ಕೆ.ಜಿ ಆಹಾರ ಧಾನ್ಯದೊಂದಿಗೆ ಹೆಚ್ಚುವರಿಯಾಗಿ 1 ಕೆ.ಜಿ.ವಿತರಿಸುವ ಸಂಬಂಧ ಆದೇಶ ಹೊರಡಿಸಲಾಗಿದೆ. ಜನವರಿಯಿಂದಲೇ ಈ ಆದೇಶ
ಅನ್ವಯವಾಗಲಿದೆ.

2022–23ನೇ ಸಾಲಿನ ಬಜೆಟ್‌ನಲ್ಲಿ ಹೆಚ್ಚುವರಿಯಾಗಿ 1 ಕೆ.ಜಿ ಆಹಾರ ಧಾನ್ಯ ವಿತರಿಸುವುದಾಗಿ ಘೋಷಿಸಲಾಗಿತ್ತು. ಆ ಪ್ರಕಾರ 2022ರ ಏಪ್ರಿಲ್‌ನಿಂದ 5 ಕೆ.ಜಿ ಆಹಾರ ಧಾನ್ಯದ ಜತೆಗೆ ಹೆಚ್ಚುವರಿ 1 ಕೆ.ಜಿ ವಿತರಿಸಲು ಆರಂಭಿಸಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಅಂದರೆ 2022 ಮೇನಿಂದ ಸೆಪ್ಟೆಂಬರ್‌ವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿತ್ತು.

ಪಿಎಂಜಿಕೆಎವೈ ಯೋಜನೆ ಅಡಿ ಆದ್ಯತಾ ವಲಯ (ಬಿಪಿಎಲ್‌) ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆ.ಜಿ ಅಕ್ಕಿಯನ್ನು 2022 ರ ಅಕ್ಟೋಬರ್‌ನಿಂದ 2022 ಡಿಸೆಂಬರ್‌ ವರೆಗೆ ಮುಂದುವರಿಸಲಾಗಿತ್ತು. ಹೀಗಾಗಿ, ಆದ್ಯತಾ ವಲಯದ ಪಡಿತರ ಫಲಾನುಭವಿಗಳಿಗೆ 1 ಕೆ.ಜಿ ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸುವುದನ್ನು ನಿಲ್ಲಿಸಲಾಗಿತ್ತು. ಪಿಎಂಜಿಕೆಎವೈ ಯೋಜನೆ ಡಿಸೆಂಬರ್‌ನಲ್ಲಿ ಕೊನೆಗೊಂಡಿದ್ದರಿಂದ 1 ಕೆ.ಜಿ ಆಹಾರ ಹೆಚ್ಚುವರಿಯಾಗಿ ವಿತರಿಸಲು ಸರ್ಕಾರ ಮುಂದಾಗಿದೆ.

ADVERTISEMENT

ಕಾಂಗ್ರೆಸ್‌ ಟೀಕೆ

ಕೇಂದ್ರ ಸರ್ಕಾರವು ಹೊಸ ವರ್ಷದಲ್ಲಿ 81 ಕೋಟಿ ಬಡವರ ಪಡಿತರದಲ್ಲಿ ಶೇ 50ರಷ್ಟು ಕಡಿತಗೊಳಿಸಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಟೀಕಿಸಿದರು.

ತಿಂಗಳಿಗೆ 10 ಕೆ.ಜಿ ಆಹಾರ ಧಾನ್ಯಕ್ಕೆ ಅರ್ಹರಾಗಿದ್ದ 81 ಕೋಟಿ ಭಾರತೀಯರು ಈಗ ಕೇವಲ ಐದು ಕೆ.ಜಿಯಷ್ಟನ್ನು ಮಾತ್ರ ಪಡೆಯಲಿದ್ದಾರೆ ಎಂದು ಮಂಗಳವಾರ ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.