ಕೋಟ (ಬ್ರಹ್ಮಾವರ): ‘ನಮ್ಮ ಜೀವನ ಪರಿಭಾಷೆಗೆ ಅಳಿವಿಲ್ಲ. ಅದು ನಮ್ಮ ಹಿರಿಯರು ನೀಡಿದ ಬಳುವಳಿ’ ಎಂದು ಮುಖಂಡ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಕೋಟ ಬಳಿಯ ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಭಾನುವಾರ ಹರ್ತಟ್ಟು ಗಿಳಿಯಾರು ನಾಗರಿಕರ ಆಶ್ರಯದಲ್ಲಿ ನಡೆದ ‘ಗಮ್ಮತ್ತಿಗೆ ಆಟ ಗಂಜಿ ಊಟ’ ಎಂಬ ಗ್ರಾಮೀಣ ಸೊಗಡು ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಜೀವನ ಕ್ರಮಗಳು ಬದಲಾವಣೆಗೊಳ್ಳುತ್ತಿವೆ. ಬಹುಮುಖ್ಯವಾಗಿ ಕೃಷಿ ಪದ್ಧತಿ ಆಧುನಿಕತೆಗೆ ಒಗ್ಗಿಹೋಗಿದ್ದು ಅತಿಯಾಗಿ ಬಳಸುವ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಮನುಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬದಲಾವಣೆ ಇರಬೇಕು, ಅದು ಆರೋಗ್ಯಕರವಾಗಿ ಮನುಕುಲದ ಒಳಿತಿಗಾಗಿ ಪ್ರಜ್ವಲಿಸಬೇಕು. ನಮ್ಮ ಪರಂಪರೆಯ ಉಳಿವಿಗಾಗಿ ಕೆಲಸ ಮಾಡಬೇಕು ಎಂದರು.
ಕೋಟ ಮಣೂರು ಗೀತಾನಂದ ಫೌಂಡೇಷನ್ ಪ್ರವರ್ತಕ ಆನಂದ ಸಿ. ಕುಂದರ್ ಉದ್ಘಾಟಿಸಿದರು. ಕಲ್ಲಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಶೇವಧಿ ಸುರೇಶ ಗಾಣಿಗ, ಜಿ.ಪಂ. ಮಾಜಿ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಪಂಚಾಯಿತಿ ಉಪಾಧ್ಯಕ್ಷ ಪಾಂಡು ಪೂಜಾರಿ, ಸದಸ್ಯ ಅಜಿತ ದೇವಾಡಿಗ, ಸಾಮಾಜಿಕ ಕಾರ್ಯಕರ್ತ ಕೆ. ದಿನೇಶ ಗಾಣಿಗ, ಸಂಘಟಕರಾದ ತಿಮ್ಮ ಕಾಂಚನ್, ಶೇಖರ ದೇವಾಡಿಗ, ಶ್ರೀಧರ ದೇವಾಡಿಗ ಭಾಗವಹಿಸಿದ್ದರು. ಕೋಡಿ ರಾಜೇಶ್ ಕರ್ಕೇರ ಸ್ವಾಗತಿಸಿದರು.
ಶಿಕ್ಷಕ ವಿಘ್ನೇಶ ದೇವಾಡಿಗ ಸಮಾಜಸೇವಕ ಮಂಜುನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಿಶೇಷ ಆಕರ್ಷಣೆಯಾಗಿ ಮೊದಲ ಬಾರಿಗೆ ಸಾಂಪ್ರದಾಯಿಕ ಕಂಬಳ ಆಯೋಜಿಸಲಾಗಿತ್ತು. ಪುರುಷರು ಮಹಿಳೆಯರಿಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಸಲಾಯಿತು. 65 ವರ್ಷ ಮೇಲ್ಪಟ್ಟ ಮಹಿಳಾ ಕೃಷಿಕರಿಗೆ ಕ್ರೀಡೆ ಮಡಿಕೆ ಸ್ಪರ್ಧೆ ಹಗ್ಗಜಗಾಟ ಥ್ರೋಬಾಲ್ ತೆಂಗಿನಕಾಯಿ ಎಸೆತ ಹೀಗೆ ಹಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.