
ಉಡುಪಿ: ಇಂದಿನ ಕೃತಕ ಬುದ್ಧಿಮತ್ತೆ (ಎಐ) ಯುಗದಲ್ಲಿ ಎಐ ತಂತ್ರಜ್ಞಾನವನ್ನು ವಿಶ್ಲೇಷಣೆ ಮತ್ತು ದತ್ತಾಂಶಕ್ಕೆ ಅನ್ವಯಿಸಲು ಮಾತ್ರ ಬಳಸಬೇಕು. ಅಂತಿಮ ನಿರ್ಧಾರವನ್ನು ಮನುಷ್ಯನೇ ಕೈಗೊಳ್ಳಬೇಕು ಎಂದು ದೆಹಲಿ-ಎನ್‌ಸಿಆರ್‌ನ ಶಿವನಾಡರ್ ವಿಶ್ವವಿದ್ಯಾಲಯದ ಕುಲಪತಿ ಅನನ್ಯ ಮುಖರ್ಜಿ ಅಭಿಪ್ರಾಯಪಟ್ಟರು.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಶುಕ್ರವಾರ ನಡೆದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ (ಮಾಹೆ) 33ನೇ ಘಟಿಕೋತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆಯಿಂದ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳು ಅದರ ಸಾಮರ್ಥ್ಯದ ಜೊತೆಗೆ ಅದರಿಂದಾಗುವ ನೈತಿಕ, ಸಾಮಾಜಿಕ ಮತ್ತು ತಾಂತ್ರಿಕ ಸವಾಲುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.
ಕೇವಲ ಶಿಕ್ಷಣ ಪಡೆದರೆ ಸಾಲದು, ಸಹಾನುಭೂತಿ, ವಿವೇಕ ಮತ್ತು ನೈತಿಕ ತಿಳಿವಳಿಕೆಯನ್ನು ಬೆಳಿಸಿಕೊಳ್ಳಬೇಕು. ಹಾಗಿದ್ದರೆ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಹೆ ಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಮಾತನಾಡಿ, ಸುಸ್ಥಿರತೆ, ಡಿಜಿಟಲ್ ಪ್ರಗತಿ ಮತ್ತು ಎಐ ಕ್ರಾಂತಿಯ ಬಗ್ಗೆ ಮಾಹೆ ಬದ್ಧತೆ ಹೊಂದಿದ್ದು, ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ನಾಯಕತ್ವ ಸ್ಥಾನಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ-2025ರ (ಎನ್‌ಐಆರ್‌ಎಫ್) ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 3ನೇ ಸ್ಥಾನ ಗಳಿಸುವ ಮೂಲಕ ಮಾಹೆಯು ಭಾರತೀಯ ಉನ್ನತ ಶಿಕ್ಷಣದಲ್ಲಿ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ ಎಂದರು.
ಮಾಹೆ ಕುಲಾಧಿಪತಿ ಡಾ. ರಾಮದಾಸ್ ಎಂ. ಪೈ ಅವರ 90ನೇ ಜನ್ಮದಿನದ ಅಂಗವಾಗಿ ರೂಪಿಸಲಾದ ಅಂಚೆ ಲಕೋಟೆಯನ್ನು ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಪೈ ಮತ್ತು ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಬಿಡುಗಡೆಗೊಳಿಸಿದರು.
64 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪದವಿ ಪ್ರದಾನ 4 ವಿದ್ಯಾರ್ಥಿಗಳಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.