
ಉಡುಪಿ: ಏಡ್ಸ್ ರೋಗದ ಬಗ್ಗೆ ಇಂದಿಗೂ ಸಮಾಜದಲ್ಲಿ ಅನೇಕ ತಪ್ಪು ಕಲ್ಪನೆಗಳು ಇದ್ದು, ಅದನ್ನು ನಿವಾರಿಸಲು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಜಿ.ಹುಬ್ಬಳ್ಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಅಂಬಲಪಾಡಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್ ದಿನ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಗಣನಾಥ ಶೆಟ್ಟಿ ಎಕ್ಕಾರು, ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಅಧ್ಯಕ್ಷೆ ತಾರಾ ಉಮೇಶ್ ಆಚಾರ್ಯ ಮಾತನಾಡಿದರು.
ಅರೆಕೆರೆ ಶ್ರೀಬಸವೇಶ್ವರ ವೀರಗಾಸೆ ಕಲಾತಂಡದವರು ವೀರಗಾಸೆ ಪ್ರದರ್ಶಿಸಿ ಯುವಜನತೆಗೆ ಜಾಗೃತಿ ಮೂಡಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ನಾಗರಾಜ ಶೆಟ್ಟಿ, ಸಂತೋಷ್ ಉಪಸ್ಥಿತರಿದ್ದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ರಾವ್ ಸ್ವಾಗತಿಸಿದರು. ಮಂಜುನಾಥ ಗಾಣಿಗ ನಿರೂಪಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್. ವಂದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಉಡುಪಿ ಬೋರ್ಡ್ ಹೈಸ್ಕೂಲ್‌ನಿಂದ ಅಂಬಲಪಾಡಿ ರಾಷ್ಟ್ರೀಯ ಸ್ವ-ಸಹಾಯ ಸಂಘ ತರಬೇತಿ ಸಂಸ್ಥೆವರೆಗೆ ನಡೆದ ಜಾಥಾಕ್ಕೆ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ರಾಜು ಪೂಜಾರಿ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.