ADVERTISEMENT

ಅದಮಾರು ಮಠದಲ್ಲಿ ಅಕ್ಕಿ ಮೂಹೂರ್ತ ಸಂಭ್ರಮ

ಪರ್ಯಾಯದ ಪೂರ್ವಭಾವಿ ಸಿದ್ಧತೆ: ಅಕ್ಕಿ ಮುಡಿಗೆ ಪೂಜೆಕ, ಅಷ್ಠಮಠಾಧೀಶರ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 13:52 IST
Last Updated 30 ಜನವರಿ 2019, 13:52 IST
ಅಕ್ಕಿಮುಹೂರ್ತ ಸಮಾರಂಭದಲ್ಲಿ ಅದಮಾರು ಮಠದ ಯತಿಗಳು ಅಕ್ಕಿಮುಡಿಗೆ ಪೂಜೆ ಸಲ್ಲಿಸಿದರು.
ಅಕ್ಕಿಮುಹೂರ್ತ ಸಮಾರಂಭದಲ್ಲಿ ಅದಮಾರು ಮಠದ ಯತಿಗಳು ಅಕ್ಕಿಮುಡಿಗೆ ಪೂಜೆ ಸಲ್ಲಿಸಿದರು.   

ಉಡುಪಿ: 2020ರ ಜನವರಿಯಲ್ಲಿ ಜರುಗಲಿರುವ ಅದಮಾರು ಮಠದ ಪರ್ಯಾಯದ ಪೂರ್ವಭಾವಿಯಾಗಿ ಬುಧವಾರ ಅಕ್ಕಿಮುಹೂರ್ತ ನೆರವೇರಿತು. ಬೆಳಿಗ್ಗೆ 9.50ರ ಶುಭ ಮುಹೂರ್ತದಲ್ಲಿ ಅದಮಾರು ಮಠದ ಹಿರಿಯ ಹಾಗೂ ಕಿರಿಯ ಶ್ರೀಗಳು ಅಕ್ಕಿಮುಹೂರ್ತಕ್ಕೆ ಚಾಲನೆ ನೀಡಿದರು.

ಮೊದಲಿಗೆ ಅದಮಾರು ಮಠದ ಆವರಣದಲ್ಲಿರುವ ಕಾಳಿಂಗ ಮರ್ಧನ ದೇವರ ಗುಡಿಯ ಮುಂದೆ ಅಕ್ಕಿ ಮುಡಿಗಳನ್ನಿಟ್ಟು ಪೂಜೆ ಸಲ್ಲಿಸಲಾಯಿತು. ಬಳಿಕ ವೇದ–ಮಂತ್ರಘೋಷಗಳೊಂದಿಗೆ ಪ್ರಾರ್ಥನೆ ನಡೆಯಿತು. ನಂತರ ಅಕ್ಕಿಮುಡಿಗಳನ್ನು ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಶ್ರೀಕೃಷ್ಣ ಮಠಕ್ಕೆ ತೆಗೆದುಕೊಂಡು ಹೋಗಲಾಯಿತು. ಮುಖ್ಯಪ್ರಾಣನ ದರ್ಶನ ಪಡೆದ ಬಳಿಕ,ವೃಂದಾವನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಅಕ್ಕಿಯ ಮುಡಿಗಳನ್ನು ಅದಮಾರು ಮಠಕ್ಕೆ ಮರಳಿ ತರಲಾಯಿತು. ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥರು ಹಾಗೂ ಕಿರಿಯ ಯತಿಗಳಾದ ಈಶಪ್ರಿಯ ತೀರ್ಥರು ದೇವರಿಗೆ ಮಹಾಮಂಗಳಾರತಿ ಮಾಡಿದರು.

ADVERTISEMENT

ಪರ್ಯಾಯದ ಅವಧಿಯಲ್ಲಿ ಯಾವುದೇ ಅಡ್ಡಿ ಆತಂಕಗಳು ಬಾರದಿರಲಿ ಎಂದು ದೇವರಲ್ಲಿ ಉಭಯ ಶ್ರೀಗಳು ಪ್ರಾರ್ಥಿಸಿದರು. ಬಳಿಕ ಪೂಜಾ ವಿಧಿವಿಧಾನಗಳು ನಡೆದವು.

ಈ ಸಂದರ್ಭ ಮಾತನಾಡಿದ ಈಶಪ್ರಿಯ ಕಿರಿಯ ಶ್ರೀಗಳು, ‘ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದ ನೀಡುವುದು ಮಠದ ಪದ್ಧತಿ. ಮುಂದಿನ ಪರ್ಯಾಯದಲ್ಲಿ ಮಠಕ್ಕೆ ಬರುವ ಭಕ್ತರಿಗೆ ಅನ್ನ ಪ್ರಸಾದ ನೀಡಲು ಅಕ್ಕಿ ಸಂಗ್ರಹಿಸುವ ಪ್ರಕ್ರಿಯೆಯಾದ ಅಕ್ಕಿಮುಹೂರ್ತಕ್ಕೆ ಚಾಲನೆ ನೀಡಲಾಗಿದೆ ಎಂದರು.

ಅಕ್ಕಿಯಿಂದ ಮೊದಲುಗೊಂಡು ಇತರ ಎಲ್ಲ ಆಹಾರ ಧಾನ್ಯಗಳನ್ನು ಸಂಗ್ರಹಿಸಲಾಗುವುದು. ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಮಠ ಪೂರ್ವ ಸಿದ್ಧತೆ ಮಾಡಿಕೊಳ್ಳಲಿದೆ. ಈ ಬಾರಿಯ ಪರ್ಯಾಯ ಮಹೋತ್ಸವದ ಅನ್ನಪ್ರಸಾದಕ್ಕೆಸಾವಯವ ಅಕ್ಕಿಯನ್ನು ಬಳಸಲಾಗುವುದು ಎಂದರು.

ಅದಮಾರು ಮಠದ ಹಿರಿಯ ಯತಿಗಳಾದ ವಿಶ್ವಪ್ರಸನ್ನ ತೀರ್ಥರು ಮಾತನಾಡಿ, ಶ್ರೀಕೃಷ್ಣಮಠಕ್ಕೆ ದೇವರನ್ನು ನೋಡಲು ಬರುವ ಭಕ್ತರನ್ನು ಸಂತುಷ್ಟಗೊಳಿಸಿದರೆ ಭಗವಂತ ಸಂತುಷ್ಟನಾಗುತ್ತಾನೆ ಎಂಬಆಚಾರ್ಯ ಮಧ್ವರ ಸಂದೇಶವನ್ನು ಅದಮಾರು ಮಠ ಪಾಲಿಸಲಿದೆ. ಭಕ್ತರ ತಲೆಗೆ ಹಾಗೂ ದೇಹಕ್ಕೆ ಆಹಾರ ಕೊಡುವ ಕೆಲಸವನ್ನು ಪರ್ಯಾಯದ ಅವಧಿಯಲ್ಲಿ ಮಾಡಲಾಗುವುದು ಎಂದರು.

**

ಮಠಾಧೀಶರಿಗೆ ಅದ್ಧೂರಿ ಸ್ವಾಗತ

ಅದಮಾರು ಮಠದ ಅಕ್ಕಿಮುಹೂರ್ತ ಕಾರ್ಯಕ್ರಮಕ್ಕೆ ಅಷ್ಠಮಠಗಳ ಯತಿಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಬಿರುದು ಬಾವುಲಿ, ಮಂಗಳ ವಾದ್ಯಗಳೊಂದಿಗೆ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ಸಾಗಿಬಂದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀ, ಪಲಿಮಾರು ಮಠದ ವಿದ್ಯಾದೀಶ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥರು, ಪೇಜಾವರ ಮಠದ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ, ಕೃಷ್ಣಾಪುರದ ಮಠದ ವಿದ್ಯಾಸಾಗರ ಸ್ವಾಮೀಜಿ ಅವರನ್ನು ಪುಷ್ಟವೃಷ್ಟಿಯ ಮೂಲಕ ಸ್ವಾಗತಿಸಲಾಯಿತು.

ಬಳಿಕ ಮಠದ ಶಿಬರೂರು ವಾಸುದೇವ ಆಚಾರ್ಯ ಅವರ ನೇತೃತ್ವದಲ್ಲಿ ಎಲ್ಲ ಯತಿಗಳಿಗೆ ಪಾದಪೂಜೆ ನೆರವೇರಿಸಲಾಯಿತು. ಈ ಸಂದರ್ಭ ನವಧಾನ್ಯ ಹಾಗೂ ಕಾಣಿಕೆಯನ್ನು ಸಮರ್ಪಿಸಲಾಯಿತು.

ಏನಿದು ಅಕ್ಕಿ ಮೂಹೂರ್ತ?

2020ರ ಜನವರಿ 18ರಿಂದ ಅದಮಾರು ಮಠದ ಶ್ರೀಕೃಷ್ಣ ಪೂಜೆಯ ಪರ್ಯಾಯ ಮಹೋತ್ಸವ ಆರಂಭವಾಗಲಿದೆ. ಈ ಪರ್ಯಾಯಕ್ಕೆ ಒಂದು ವರ್ಷ ಮುಂಚಿತವಾಗಿ ಸಿದ್ಧತೆಗಳು ಆರಂಭವಾಗುತ್ತವೆ. ಬಾಳೆ, ಅಕ್ಕಿ, ಕಟ್ಟಿಗೆ ಹಾಗೂ ಭತ್ತ ಮುಹೂರ್ತಗಳನ್ನು ನೆರವೇರಿಸುವ ಮೂಲಕ ಮುಂದಿನ ಪರ್ಯಾಯದ ಅವಧಿಯಲ್ಲಿ ಭಕ್ತರಿಗೆ ಅನ್ನದಾಸೋಹಕ್ಕೆ ಅಗತ್ಯವಾದ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಡಿಸೆಂಬರ್‌ನಲ್ಲಿ ಬಾಳೆ ಮುಹೂರ್ತ ನಡೆದಿತ್ತು. ಈಗ ಅಕ್ಕಿ ಮುಹೂರ್ತ ನೆರವೇರಿದೆ. ಪರ್ಯಾಯ ಆರಂಭದ ಹೊತ್ತಿಗೆ ಉಳಿದ ಕಟ್ಟಿಗೆ ಹಾಗೂ ಭತ್ತ ಮುಹೂರ್ತ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.