ADVERTISEMENT

ಅನುದಾನ ತಿಂಗಳು ತಡವಾದರೂ ಅಡ್ಡಿ ಇಲ್ಲ: ಸಂಸದೆ ಶೋಭಾ ಕರಂದ್ಲಾಜೆ

ಶಾಶ್ವತ ಕಾಮಗಾರಿಗಳಿಗೆ ಬೇಕಿದೆ ಹಣ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 14:12 IST
Last Updated 30 ಸೆಪ್ಟೆಂಬರ್ 2019, 14:12 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ: ನೆರೆ ಸಂತ್ರಸ್ಥರಿಗೆ ರಾಜ್ಯ ಸರ್ಕಾರತಾತ್ಕಾಲಿಕ ಪರಿಹಾರ ವಿತರಣೆ ಮಾಡುತ್ತಿದೆ. ಮನೆ, ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಹಣದ ಅಗತ್ಯವಿದೆ. ಹಸಿ ಭೂಮಿಯಲ್ಲಿ ಶಾಶ್ವತ ಕಾಮಗಾರಿ ನಡೆಸಲು ಸಾಧ್ಯವಿಲ್ಲದ್ದರಿಂದ ಒಂದು ತಿಂಗಳು ತಡವಾಗಿ ಕೇಂದ್ರದಿಂದ ಹಣ ಬಿಡುಗಡೆಯಾದರೂ ಅಡ್ಡಿಯಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ನಿಯಮಗಳಡಿ ರಾಜ್ಯಕ್ಕೆ ಹಣ ಬಿಡುಗಡೆಯಾಗಲಿದೆ. ನೆರೆಯ ಮಹಾರಾಷ್ಟ್ರದಲ್ಲೂ ಹೆಚ್ಚಿನ ಹಾನಿ ಸಂಭವಿಸಿದ್ದು, ಅಲ್ಲಿಯೂ ಹಣ ಬಿಡುಗಡೆಯಾಗಿಲ್ಲ. ಎಲ್ಲ ರಾಜ್ಯಗಳಿಗೆ ಏಕಕಾಲದಲ್ಲಿ ಹಣ ಬಿಡುಗಡೆ ಸಾಧ್ಯತೆ ಇದೆ ಎಂದರು.

ಕೇಂದ್ರದಿಂದ ಪರಿಹಾರ ಪಡೆಯಲು ರಾಜ್ಯದ ನಾಯಕರು ಸತತ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸಚಿವರು, ಮುಖ್ಯಮಂತ್ರಿ ಯಡಿಯೂರಪ್ಪ ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಶೋಭಾ ಹೇಳಿದರು.

ADVERTISEMENT

ಕೇಂದ್ರ ಸರ್ಕಾರದ ತಂಡ ಈಗಾಗಲೇ ರಾಜ್ಯದಲ್ಲಿ ನೆರೆ ಹಾನಿ ಸಮೀಕ್ಷೆ ಮಾಡಿದೆ. ಸಂಪೂರ್ಣ ಮನೆ ಹಾನಿಗೆ ₹ 5 ಲಕ್ಷ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಭಾಗಶಃ ಹಾನಿಗೆ ₹ 1 ಲಕ್ಷ ಕೊಡಲು ತೀರ್ಮಾನಿಸಿದೆ ಎಂದರು.

ಕೇಂದ್ರದಿಂದ ಶಾಶ್ವತ ಕಾಮಗಾರಿಗೆ ಹಣ ಬಿಡುಗಡೆಯಾದ ಬಳಿಕ ಸಂತ್ರಸ್ತರಿಗೆಜಮೀನು, ನಿವೇಶನ ನೀಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ನೆರೆ ಸಂತ್ರಸ್ತರ ಕಣ್ಣಿರು ಒರೆಸಲು ಸರ್ಕಾರ ಬದ್ಧವಾಗಿದೆ ಎಂದರು.

10 ತಿಂಗಳೊಳಗೆ ಮನೆ ನಿರ್ಮಾಣ ಮಾಡುವ ಗುರಿ ಇದೆ. ರಾಜ್ಯ ಸರ್ಕಾರ ಎಷ್ಟು ಹಣ ಖರ್ಚು ಮಾಡುವುದೋ ಅಷ್ಟು ಹಣವನ್ನುಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್ ಅಡಿ ಕೇಂದ್ರದಿಂದ ಪಡೆಯಲು ಅವಕಾಶವಿದೆ. ರಾಜ್ಯ ಸರ್ಕಾರ ಈ ಬಗ್ಗೆಯೂ ಚಿಂತಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.