
ಉಡುಪಿ: ಯೋಗಪಟುಗಳಿಂದ ಮೈನವಿರೇಳಿಸುವ ಯೋಗಾಸನ ಪ್ರದರ್ಶನ, ಶಾಸ್ತ್ರೀಯ ನೃತ್ಯದ ಮೂಲಕ ಪೌರಾಣಿಕ ಪ್ರಪಂಚವನ್ನೇ ತೆರೆದಿಟ್ಟ ನೃತ್ಯಗಾತಿಯರು. ಪ್ರೇಕ್ಷಕರನ್ನು ಮೋಡಿ ಮಾಡಿದ ಮಲ್ಲಕಂಬ, ರೋಪ್ ಕಸರತ್ತುಗಳು...
ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣ ಸಮೀಪದ ವಾಹನ ನಿಲುಗಡೆ ಪ್ರದೇಶದಲ್ಲಿ ನಿರ್ಮಿಸಿದ್ದ ವಿಶ್ವೇಶತೀರ್ಥ ಶ್ರೀಪಾದ ವೇದಿಕೆಯಲ್ಲಿ ಶನಿವಾರ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ವಿದ್ಯಾರ್ಥಿ ಕಲಾವಿದರು ಸಾಂಸ್ಕೃತಿಕ ಲೋಕವನ್ನೇ ತೆರೆದಿಟ್ಟರು.
ಬಡಗುತಿಟ್ಟು ಯಕ್ಷಗಾನ–ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರದ ಸ್ಟಿಕ್ ಡ್ಯಾನ್ಸ್, ಕಥಕ್ ನೃತ್ಯ, ಡೊಳ್ಳುಕುಣಿತ, ಪುರುಲಿಯಾ ಸಿಂಹ ನೃತ್ಯಗಳು ಉಡುಪಿಯ ಪ್ರೇಕ್ಷಕರಿಗೆ ಮನೋರಂಜನೆಯನ್ನು ಉಣಬಡಿಸಿದವು.
ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಈ ವರ್ಷ ರಾಜ್ಯದಾದ್ಯಂತ 50 ಕಡೆಗಳಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನೀಡಲಿದ್ದೇವೆ. ಕೇವಲ ಮನೋರಂಜನೆ ನೀಡುವುದು ಮಾತ್ರವಲ್ಲ ಜೊತಗೆ ಹಲವಾರು ಸಂದೇಶಗಳನ್ನು ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಶಾಸ್ತ್ರೀಯ, ಜಾನಪದ ಕಲೆಯನ್ನು ಭವ್ಯ ಪರಂಪರೆಯನ್ನು ನಮ್ಮ ಹಿರಿಯರು ನಮಗಾಗಿ ನೀಡಿದ್ದಾರೆ. ಆ ಸಂಪತ್ತು ಮುಂದಿನ ಪೀಳಿಗೆಗೂ ತಲುಪಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳ ಮೂಲಕ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ನಮ್ಮ ದೇಶದಲ್ಲಿ 52 ಕೋಟಿ ಯುವ ಸಂಪತ್ತು ಇದೆ. ಕಾಲಕಾಲಕ್ಕೆ ಬೇಕಾಗುವ ಶಿಕ್ಷಣದ ಜೊತೆಗೆ ಸಾಂಸ್ಕೃತಿಕತೆಯನ್ನೂ ಅವರಲ್ಲಿ ಬಿತ್ತಬೇಕಾದ ಅಗತ್ಯ ಇದೆ ಎಂದು ಪ್ರತಿಪಾದಿಸಿದರು.
ವಿದ್ಯಾರ್ಥಿಗಳ ಮೂಲಕ ನಾಡಿನಾದ್ಯಂತ ಜನರಲ್ಲಿ ಸೌಂದರ್ಯ ಪ್ರಜ್ಞೆ ಬಿತ್ತುತ್ತಿದ್ದೇವೆ. ಸೌಂದರ್ಯ ಪ್ರಜ್ಞೆಯ ಮೂಲಕ ದೇಶಪ್ರೇಮವೂ ಬೆಳೆಯುತ್ತದೆ ಎಂದು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಸ್ವಾಮೀಜಿ, ಮೂಡುಬಿದಿರೆಯ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ, ಅಮೆರಿಕದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ವಿಲಿಯಂ ಎಫ್. ವಿಂಡ್ಲೆ, ಶಾಸಕ ಯಶ್‌ಪಾಲ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು. ವೇಣುಗೋಪಾಲ ಶೆಟ್ಟಿ ನಿರೂಪಿಸಿದರು. ಭುವನಪ್ರಸಾದ್ ಹೆಗ್ಡೆ ವಂದಿಸಿದರು.
ಆಳ್ವಾಸ್‌ನವರು ಸಾಂಸ್ಕೃತಿಕ ಪ್ರಪಂಚವನ್ನು ಆಳುವವರು ಮೋಹನ ಆಳ್ವರ ನೇತೃತ್ವದಲ್ಲಿ ಭಾರತದ ಸಂಸ್ಕೃತಿಯ ಜಯ ಪತಾಕೆ ಹಾರಿಸಲಾಗುತ್ತಿದೆ.– ಸುಗುಣೇಂದ್ರತೀರ್ಥ ಸ್ವಾಮೀಜಿ, ಪರ್ಯಾಯ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.