ADVERTISEMENT

ಅಧಿಸೂಚಿತ ನಿವೇಶನಗಳೆಂದು ಘೋಷಿಸಿ: ಪ್ರೊ.ಟಿ. ಮುರುಗೇಶಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:20 IST
Last Updated 11 ನವೆಂಬರ್ 2025, 4:20 IST
ಅವಲಕ್ಕಿಪಾರೆಯ ರೇಖಾಕೃತಿಗಳು
ಅವಲಕ್ಕಿಪಾರೆಯ ರೇಖಾಕೃತಿಗಳು   

ಉಡುಪಿ: ಕರಾವಳಿಯ ಹಲವು ಪುರಾತತ್ತ್ವ ನಿವೇಶನಗಳು ಚಾರಿತ್ರಿಕವಾಗಿ ರಾಷ್ಟ್ರೀಯ ಮಹತ್ವವನ್ನು ಹೊಂದಿದ್ದು, ಅವುಗಳ ಸಂರಕ್ಷಣೆ ತುರ್ತು ಅಗತ್ಯವಾಗಿದೆ. ಅದಕ್ಕಾಗಿ ಈ ನಿವೇಶನಗಳನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆದಿಮ ಕಲಾ ಟ್ರಸ್ಟ್ ಸಂಚಾಲಕ ಪ್ರೊ.ಟಿ. ಮುರುಗೇಶಿ ಅವರು ಮೈಸೂರಿನ ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ಕರಾವಳಿಯ ಕೆಲವು ಪ್ರಮುಖ ಪುರಾತತ್ತ್ವ ನಿವೇಶನಗಳಾದ ಅವಲಕ್ಕಿಪಾರೆ, ಬುದ್ಧನಜೆಡ್ಡು, ಗಾವಳಿ, ಬರದಕಲ್ಲು ಬೋಳೆ, ಮದ್ಮಲ್‍ಪಾದೆ, ಮೂಡುಕೋಣಾಜೆಯನ್ನು ಅಧಿಸೂಚಿತ ನಿವೇಶನಗಳೆಂದು ಘೋಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಕುಂದಾಪುರ ತಾಲ್ಲೂಕಿನ ಅವಲಕ್ಕಿಪಾರೆಯಲ್ಲಿ 20ಕ್ಕಿಂತಲೂ ಹೆಚ್ಚು ಮಾನವರ, ಪ್ರಾಣಿಗಳ ರೇಖಾಕೃತಿಗಳು ಸುಮಾರು ಅರ್ಧ ಎಕರೆ ಭೂ ವಿಸ್ತೀರ್ಣದಲ್ಲಿ ಹರಡಿಕೊಂಡಿವೆ. ಬುದ್ಧನಜೆಡ್ಡುವಿನಲ್ಲಿ ಸುಮಾರು ಅರ್ಧ ಎಕರೆ ಜಾಗದಲ್ಲಿ 40ಕ್ಕಿಂತಲೂ ಹೆಚ್ಚು ಮಾನವ, ಪ್ರಾಣಿ-ಪಕ್ಷಿಗಳ ರೇಖಾಕೃತಿಗಳಿವೆ ಎಂದು ಅವರು ಹೇಳಿದ್ದಾರೆ.

ADVERTISEMENT

ಗಾವಳಿಯಲ್ಲಿ ಗೂಳಿಯ ಚಿತ್ರಗಳು ಕಂಡುಬಂದಿವೆ. 2010ರಲ್ಲಿ ಇದೇ ನಿವೇಶನದಲ್ಲಿ ನೂತನ ಶಿಲಾಯುಗದ ಕಲ್ಲಿನ ಆಯುಧಗಳನ್ನು ಶೋಧಿಸಿ ಪ್ರಕಟಿಸಿದ್ದೇನೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಬರದಕಲ್ಲು ಬೋಳೆಯಲ್ಲಿ ಮಾನವರ, ಪ್ರಾಣಿಗಳ  ರೇಖಾಕೃತಿ ಚಿತ್ರಗಳು ಕಂಡುಬಂದಿವೆ. ಕಾರ್ಕಳ ತಾಲ್ಲೂಕಿನ ಮದ್ಮಲ್‍ಪಾದೆಯಲ್ಲಿ ಕಲ್ಲುಬೆಟ್ಟದ ಮೇಲೆ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಕೊಣಾಜೆಯಲ್ಲಿ ಬೃಹತ್ ಶಿಲಾಯುಗದ ಕಲ್ಮನೆ ಸಮಾಧಿಗಳಿವೆ ಅವುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.